**ಚಿಂಚೋಳಿಯಲ್ಲಿ ನವೆಂಬರ್ 3 ರಂದು ಪ್ರಥಮ ಬೌದ್ಧ ಧಮ್ಮ ಪರಿಷತ್: ಪೋಲಕಪಳ್ಳಿ ಐಬಿಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ ಗೌತಮ್ ಬೊಮ್ಮನಳ್ಳಿ**
**ಕನ್ನಡ ಸಾಮ್ರಾಟ್ ನ್ಯೂಸ್ ನೆಟ್‌ವರ್ಕ್, ಚಿಂಚೋಳಿ:**
ತಾಲೂಕಿನ ಐತಿಹಾಸಿಕ ನೆಲೆಯಲ್ಲಿ ತಥಾಗತ ಗೌತಮ ಬುದ್ಧನ ಕರುಣೆ, ಪ್ರಜ್ಞೆ, ಹಾಗೂ ಶಾಂತಿಯ ಸಂದೇಶವನ್ನು ಜನಮನಕ್ಕೆ ತಲುಪಿಸುವ ಮಹತ್ಕಾರ್ಯಕ್ಕೆ ಮುನ್ನುಡಿ ಬರೆಯಲಾಗಿದೆ. ಚಿಂಚೋಳಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನವೆಂಬರ್ 3, 2026ರಂದು ಹಮ್ಮಿಕೊಳ್ಳಲಾಗಿರುವ ‘ಪ್ರಥಮ ಬೌದ್ಧ ಧಮ್ಮ ಪರಿಷತ್’ ಕಾರ್ಯಕ್ರಮದ ಅಧಿಕೃತ ಪೋಸ್ಟರ್ ಅನ್ನು ಪೋಲಕಪಳ್ಳಿಯ ಐಬಿ (ಪ್ರವಾಸಿ ಮಂದಿರ)ಯಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಯಿತು.
ದೀಕ್ಷಾ ಬುದ್ಧವಿಹಾರ ಹಾಗೂ ಚಾರಿಟೇಬಲ್ ಟ್ರಸ್ಟ್ (ರಿ) ತುಮಕುಂಟಾ ಮತ್ತು ಭಾರತ ಭ್ರಮಣ ಭಿಕ್ಷು ಸಂಘ (ರಿ) ಮುಂಬೈ ಇವರ ಸಂಯುಕ್ತಾಶ್ರಯದಲ್ಲಿ ಈ ಐತಿಹಾಸಿಕ ಧಮ್ಮ ಪರಿಷತ್ ಆಯೋಜನೆಗೊಂಡಿದೆ.
ಕಾರ್ಯಕ್ರಮದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಧಮ್ಮ ಪರಿಷತ್ ಅಧ್ಯಕ್ಷ ಗೌತಮ್ ಬೊಮ್ಮನಳ್ಳಿ, “ಕಲಬುರಗಿ ಜಿಲ್ಲೆಯ ಗಡಿ ತಾಲೂಕಾದ ಚಿಂಚೋಳಿ ಭಾಗದಲ್ಲಿ ಧಮ್ಮ ಪ್ರಚಾರ, ಪ್ರಸಾರದ ಅವಶ್ಯಕತೆ ಅಪಾರವಾಗಿದೆ. ಈ ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬುದ್ಧನ ಅನುಯಾಯಿಗಳು ಹಾಗೂ ಬೌದ್ಧ ಉಪಾಸಕ-ಉಪಾಸಿಕೆಯರಿದ್ದರೂ, ಧಮ್ಮದ ತತ್ವಾದರ್ಶಗಳನ್ನು ವ್ಯವಸ್ಥಿತವಾಗಿ ಸಮಾಜಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಈ ಸಮ್ಮೇಳನವನ್ನು ಸಂಘಟಿಸಲಾಗಿದೆ. ನವೆಂಬರ್ 3 ರಂದು ನಡೆಯಲಿರುವ ಈ ಪವಿತ್ರ ಕಾರ್ಯಕ್ರಮಕ್ಕೆ ತಾಲೂಕು ಹಾಗೂ ಸುತ್ತಮುತ್ತಲಿನ ಸಮಸ್ತ ಬೌದ್ಧ ಭಾಂದವರು, ಉಪಾಸಕ-ಉಪಾಸಿಕೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.
ಪೂಜ್ಯ ಭಂತೆ ಶಾಸನ ಸೂರಿ ಜಿ ಸಾನ್ನಿಧ್ಯ ವಹಿಸಲಿರುವ ಈ ಧಮ್ಮ ಪರಿಷತ್ತಿನಲ್ಲಿ ಪ್ರಮುಖ ಧಾರ್ಮಿಕ ಆಚರಣೆಗಳು, ರ್ಯಾಲಿ, ಉಪಾಸಕರಿಗೆ ಧಮ್ಮ ದೀಕ್ಷೆ ಹಾಗೂ ಧಮ್ಮದ ಬೆಳವಣಿಗೆಗೆ ಶ್ರಮಿಸಿದ ಮಹನೀಯರಿಗೆ ಗೌರವ ಸಮರ್ಪಣೆ ನಡೆಯಲಿದೆ.
**ಉಪಸ್ಥಿತಿ:**
ಪೋಲಕಪಳ್ಳಿ ಐಬಿಯಲ್ಲಿ ನಡೆದ ಈ ಸುದ್ದಿಗೋಷ್ಠಿಯಲ್ಲಿ ಭಂತೇಜಿ ಅವರ ಸಾನ್ನಿಧ್ಯದೊಂದಿಗೆ ಪ್ರಮುಖರಾದ ವೈಜನಾಥ ಮಿತ್ರಾ, ದಲಿತ ಮುಖಂಡ ರಾಜಶೇಖರ್ ಹೊಸಮನಿ, ಮಾರುತಿ ಅಪರಾ, ರಾಜು ಕಾಳಸ್ಕರ್, ಯಲ್ಲಲಿಂಗ ದಂಡಿನ , ನಾಗಸೇನ್ ಬೊಮ್ಮನಹಳ್ಳಿ ಹಾಗೂ jk news ರಾಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು.











