*ಕೇಂದ್ರ ನೆರೆ ಹಾನಿ ತಂಡದಿಂದ ಬೆಳೆ ಹಾನಿ ವೀಕ್ಷಣೆ*
*ರೈತರು ಅಳಲು ಆಲಿಸಿದ ತಂಡ*
ಕಲಬುರಗಿ,ಜ.13 ಕಳೆದ ಆಗಸ್ಟ್, ಸೆಪ್ಟೆಂಬರ್ ಮಾಹೆಯಲ್ಲಿ ಭೀಕರ ಮಳೆಯಿಂದ ಜಿಲ್ಲೆಯಲ್ಲಿ ಹಾಳಾದ ಬೆಳೆಗಳ ಹಾನಿಗಳ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರ ತಂಡವು ಮಂಗಳವಾರ ಜಿಲ್ಲೆಯ ಕಮಲಾಪುರ ತಾಲೂಕಿನ ಕಿಣ್ಣಿ ಸಡಕ್, ಡೊಂಗರಗಾಂವ, ಭೀಮನಾಳ, ಕಮಲಾಪೂರ ಗ್ರಾಮಗಳಿಗೆ ಭೇಟಿ ನೀಡಿ ನೆರೆಯಿಂದ ಹಾನಿಯಾದ ಬೆಳೆ, ರಸ್ತೆ, ಸೇತುವೆ ಹಾನಿ ವೀಕ್ಷಣೆ ಮಾಡಿತು.
ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಹೈದ್ರಾಬಾದಿನ ಎಣ್ಣೆ ಬೀಜ ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ.ಪೊನ್ನುಸ್ವಾಮಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯದ ಅಧೀನ ಕಾರ್ಯದರ್ಶಿ ಜಯಶ್ರೀ ಕಕ್ಕರ್ ಅವರು ಬೆಳೆ ಹಾನಿ, ಮೂಲಸೌಕರ್ಯ ಹಾನಿ ವೀಕ್ಷಿಸಿ ರೈತರ ಅಳಲು ಆಲಿಸಿದರು.
ಡೊಂಗರಗಾಂವ ಗ್ರಾಮದ ಸರ್ವೇ ನಂ. 20/3ರಲ್ಲಿ ಸುಮಾರು 4.32 ಎಕರೆ ಪ್ರದೇಶದಲ್ಲಿ ತೊಗರಿ ಬೆಳೆದು ಬೆಳೆ ಹಾನಿಗೊಳಗಾಗಿರುವ ರೈತ ಅಭಿಷೇಕ್ ಅವರ ಹೊಲಕ್ಕೆ ಭೇಟಿ ನೀಡಿ ಹಾಳಾದ ತೊಗರಿ ಬೆಳೆ ವೀಕ್ಷಿಸಿದರು. ಪ್ರತಿ ಎಕರೆ 30 ಸಾವಿರ ಖರ್ಚು ಮಾಡಿ ತೊಗರಿ ಬೆಳೆದಿದ್ದು, ವಿಪರೀತ ಮಳೆಯಿಂದ ಎಲ್ಲವು ಹಾಳಾಗಿದೆ. ಬಿತ್ತಿದ 5-6 ಕೆ.ಜಿ. ಬಾರದ ಸ್ಥಿತಿಯಲ್ಲಿದೆ ಎಂದು ತಂಡದ ಮುಂದೆ ರೈತ ಅಭಿಷೇಕ ತನ್ನ ಅಳಲು ತೋಡಿಕೊಂಡ.
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಾದ್ಯಂತ ವಾಡಿಕೆಗ್ಗಿಂತ ಹೆಚ್ಚಿನ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿವೆ. ಇದಲ್ಲದೆ ಶಾಲೆ, ಅರೋಗ್ಯ ಕೇಂದ್ರ, ಅಂಗನವಾಡಿ, ರಸ್ತೆ, ಸೇತುವೆದಂತಹ ಮೂಲಸೌಕರ್ಯ ಸಹ ಹಾನಿಗೊಳಗಾಗಿವೆ. ಈಗಾಗಲೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪರಿಹಾರ ಒದಗಿಸಿದೆ. ಮುಖ್ಯಮಂತ್ರಿಗಳು ಈ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ರಾಜ್ಯ ಸರ್ಕಾರದಿಂದ ಪರಿಹಾರ ಘೋಷಿಸಿದ್ದು, ಅದರಂತೆ ಪರಿಹಾರ ಸಹ ಪಾವತಿಸಿದೆ ಎಂದು ವಿವರಣೆ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ ಕಮಲಾಪೂರ ತಾಲೂಕಿನಲ್ಲಿ 7,892 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತಿದ್ದು, ಇದರಲ್ಲಿ ಶೇ.80ರಷ್ಟು ಬೆಳೆ ಹಾನಿಯಾಗಿದೆ. ಮಣ್ಣಿನಲ್ಲಿ ಇನ್ನು ತೇವಾಂಶ ಇದ್ದು, ಎರಡನೇ ಬೆಳೆ ಬೆಳೆಯುವಂತಿಲ್ಲ. ತೀರಾ ಕೆಟ್ಟ ಸ್ಥಿತಿಯಲ್ಲಿ ರೈತಾಪಿ ವರ್ಗವಿದೆ ಎಂದು ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು.
*ಕಮಲಾಪೂರದಲ್ಲಿ ಬೆಳೆ ಹಾನಿ ವೀಕ್ಷಣೆ:*
ಕಮಲಾಪೂರ ಗ್ರಾಮದ ಸರ್ವೆ ನಂ. 323 ರಲ್ಲಿ ಮಹಾದೇವಪ್ಪ ಬಸವಣಪ್ಪ ಸವರಿಗೆ ಸೇರಿದ 6.19 ಎಕರೆಯಲ್ಲಿ ಬೆಳೆದ ತೊಗರಿ ಬೆಳೆ ಹಾನಿ ಸಹ ತಂಡ ವೀಕ್ಷಿಸಿತು. ರೈತ ಪ್ರಶಾಂತ ಮಾತನಾಡಿ ಮೂರಕ್ಕಿಂತ ಹೆಚ್ಚಿನ ಎಕರೆ ಮಳೆಗೆ ಬೆಳೆ ಹಾಳಾಗಿದೆ. ಪ್ರತಿ ಎಕರೆಗೆ 25-30 ಸಾವಿರ ರೂ. ಖರ್ಚು ಮಾಡಿವೆ ಮಳೆ ಎಲ್ಲವನ್ನು ಕೊಚ್ಚಿಕೊಂಡು ಹೋಗಿದೆ. ತದನಂತರ ಕುಸಬಿ ಬೆಳೆದಿದ್ದು, ವ್ಯಾಪಕ ಮಳೆಯಿಂದ ಇದರ ಇಳುವರಿ ಬರೋದರ ಕುರಿತು ಅನುಮಾನ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ತಂಡವು ಕಿಣ್ಣಿಸಡಕ್-ಡೋರ ಜಂಬಗಾ ನಡುವಿನ ಸೇತುವೆ, ಭೀಮನಾಳ ಗ್ರಾಮದಲ್ಲಿನ ರಸ್ತೆ ಹಾನಿ ವೀಕ್ಷಣೆ ಮಾಡಿತು.
ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ, ತಹಶೀಲ್ದಾರ ಮೊಹಮ್ಮದ್ ಮೋಹಸೀನ್, ಕೃಷಿ ಉಪನಿರ್ದೇಶಕಿ ಅನುಸೂಯಾ ಹೂಗಾರ, ಸಹಾಯಕ ಕೃಷಿ ನಿರ್ದೇಶಕ ಡಾ.ಅರುಣಕುಮಾರ ಮೂಲಿಮನಿ ಇದ್ದರು.




