Home » ಕಲಬುರಗಿ » ಚಿಂಚೋಳಿ » ಚಿಂಚೋಳಿ ಜಿ.ಪಂ-ತಾ.ಪಂ ಕರಡು ಮೀಸಲಾತಿಯಲ್ಲಿ ಭಾರೀ ಅನ್ಯಾಯ: ಮೂಲ ಪರಿಶಿಷ್ಟ ಜಾತಿಗಳಿಗೆ ದ್ರೋಹ ಆರೋಪಿಸಿ ‘ದಲಿತ ಪ್ಯಾಂಥರ್’ ಆಕ್ಷೇಪಣೆ

ಚಿಂಚೋಳಿ ಜಿ.ಪಂ-ತಾ.ಪಂ ಕರಡು ಮೀಸಲಾತಿಯಲ್ಲಿ ಭಾರೀ ಅನ್ಯಾಯ: ಮೂಲ ಪರಿಶಿಷ್ಟ ಜಾತಿಗಳಿಗೆ ದ್ರೋಹ ಆರೋಪಿಸಿ ‘ದಲಿತ ಪ್ಯಾಂಥರ್’ ಆಕ್ಷೇಪಣೆ

**ಚಿಂಚೋಳಿ ಜಿ.ಪಂ-ತಾ.ಪಂ ಕರಡು ಮೀಸಲಾತಿಯಲ್ಲಿ ಭಾರೀ ಅನ್ಯಾಯ: ಮೂಲ ಪರಿಶಿಷ್ಟ ಜಾತಿಗಳಿಗೆ ದ್ರೋಹ ಆರೋಪಿಸಿ ‘ದಲಿತ ಪ್ಯಾಂಥರ್’ ಆಕ್ಷೇಪಣೆ**
**ಕಲಬುರಗಿ / ಚಿಂಚೋಳಿ:**
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳ ಕರಡು ಮೀಸಲಾತಿ ಹಂಚಿಕೆಯಲ್ಲಿ ಜನಸಂಖ್ಯೆಯ ವಾಸ್ತವಾಂಶಗಳನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ಮೂಲ ಪರಿಶಿಷ್ಟ ಜಾತಿಗಳಿಗೆ ಗಂಭೀರ ಅನ್ಯಾಯವೆಸಗಲಾಗಿದೆ ಎಂದು ಆರೋಪಿಸಿ ‘ಭಾರತೀಯ ದಲಿತ ಪ್ಯಾಂಥರ್ (ರಿ)’ ತಾಲೂಕ ಸಮಿತಿ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದೆ. ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗಳಿಗೆ ಚಿಂಚೋಳಿ ತಹಸೀಲ್ದಾರರ ಮುಖಾಂತರ ಸಂಘಟನೆಯ ಪದಾಧಿಕಾರಿಗಳು ಲಿಖಿತ ಆಕ್ಷೇಪಣಾ ಪತ್ರ ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರವು ದಿನಾಂಕ 09 ಅಕ್ಟೋಬರ್ 2026 ರಂದು ಹೊರಡಿಸಿರುವ ಕರಡು ಮೀಸಲಾತಿ ಅಧಿಸೂಚನೆ (ಸಂಖ್ಯೆ: RDPR 191 ZPS) ಯಲ್ಲಿ ಚಿಂಚೋಳಿ ತಾಲೂಕಿನ ಒಟ್ಟು 5 ಜಿಲ್ಲಾ ಪಂಚಾಯತ್ ಹಾಗೂ 18 ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ಸಿದ್ಧಪಡಿಸಲಾಗಿರುವ ಮೀಸಲಾತಿಯು ಅವೈಜ್ಞಾನಿಕವಾಗಿದೆ ಎಂದು ನಿಯೋಗ ಆರೋಪಿಸಿದೆ.
ಮೀಸಲಾತಿ ಕರಡಿನಲ್ಲಿರುವ ಲೋಪಗಳೇನು?
ಸಂಘಟನೆಯ ತಾಲೂಕಾಧ್ಯಕ್ಷ ಚೇತನ್ ನಿರಾಳಕರ್ ನೇತೃತ್ವದಲ್ಲಿ ಸಲ್ಲಿಸಲಾದ ಮನವಿಯಲ್ಲಿ ಪ್ರಮುಖ ಕ್ಷೇತ್ರಗಳ ವಾಸ್ತವ ಸ್ಥಿತಿಯನ್ನು ಎಳೆಎಳೆಯಾಗಿ ಬಿಡಿಸಿಡಲಾಗಿದೆ:
* **ಕುಂಚವರಂ ಕ್ಷೇತ್ರ:** ಈ ಕ್ಷೇತ್ರದಲ್ಲಿ ಬಂಜಾರ (ಲಂಬಾಣಿ) ಸಮುದಾಯದ ಜನಸಂಖ್ಯೆ ಮತ್ತು ತಾಂಡಾಗಳು ಗರಿಷ್ಠ ಸಂಖ್ಯೆಯಲ್ಲಿದ್ದು, ಅವರೇ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಆದರೆ, ಮೂಲ ಪರಿಶಿಷ್ಟ ಜಾತಿಗಳಾದ ಹೊಲೆಯ, ಮಾದಿಗ ಮತ್ತು ಭೋವಿ ಸಮುದಾಯಗಳ ಮತದಾರರ ಸಂಖ್ಯೆ ತೀರಾ ಕಡಿಮೆ ಇದೆ. ಇಂತಹ ಕ್ಷೇತ್ರವನ್ನು ಪರಿಶಿಷ್ಟ ಜಾತಿಗೆ ಮೀಸಲಿಟ್ಟಿರುವುದರಿಂದ ಮೂಲ ಪರಿಶಿಷ್ಟ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯವೇ ಸಿಗದಂತಾಗಿ, ಅವರನ್ನು ಮೂಲೆಗುಂಪು ಮಾಡಿದಂತಾಗುತ್ತದೆ.
* **ಐನೋಳ್ಳಿ ಕ್ಷೇತ್ರ:** ಈ ಕ್ಷೇತ್ರದಲ್ಲಿ ಅನುಸೂಚಿತ ಪಂಗಡದ (ST) ಮತದಾರರು ಗಣನೀಯವಾಗಿ ಇಲ್ಲದಿದ್ದರೂ, ಈ ಹಿಂದೆ ಇದ್ದ ‘SC ಮಹಿಳೆ’ ಮೀಸಲಾತಿಯನ್ನು ಬದಲಾಯಿಸಿ ಏಕಾಏಕಿ ‘ST ಮಹಿಳೆ’ ಎಂದು ನಿಗದಿಪಡಿಸಲಾಗಿದೆ. ಇದು ಮೂಲ ಪರಿಶಿಷ್ಟ ಜಾತಿಯ (ಹೊಲೆಯ-ಮಾದಿಗ) ಪ್ರಾತಿನಿಧ್ಯವನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಕುತಂತ್ರದಂತೆ ಕಾಣುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
* **ಚಿಮ್ಮನಚೋಡ್ ಮತ್ತು ಸುಲೇಪೇಟ್ ಕ್ಷೇತ್ರಗಳು:** ಈ ಎರಡೂ ಕ್ಷೇತ್ರಗಳಲ್ಲಿ ಹೊಲೆಯ ಮತ್ತು ಮಾದಿಗ ಸಮುದಾಯದ ಮತದಾರರ ಸಂಖ್ಯೆ ಅತಿ ಹೆಚ್ಚಾಗಿದೆ. ಹೀಗಿದ್ದರೂ ಈ ಕ್ಷೇತ್ರಗಳನ್ನು ‘ಸಾಮಾನ್ಯ’ ಹಾಗೂ ‘ಸಾಮಾನ್ಯ ಮಹಿಳೆ’ ವರ್ಗಕ್ಕೆ ಮೀಸಲಿಟ್ಟಿರುವುದು ದಲಿತ ಸಮುದಾಯಗಳಿಗೆ ಬಗೆದ ಮಹಾದ್ರೋಹವಾಗಿದೆ.
### ತಾ.ಪಂ ಕ್ಷೇತ್ರಗಳಲ್ಲೂ ತಾರತಮ್ಯ
ತಾಲೂಕು ಪಂಚಾಯತ್ ಕ್ಷೇತ್ರಗಳ ಮೀಸಲಾತಿ ಪಟ್ಟಿಯಲ್ಲೂ ಇದೇ ರೀತಿಯ ಅನ್ಯಾಯ ಮುಂದುವರಿದಿದೆ. ಪ್ರಸ್ತುತ ಚಿಮ್ಮನಚೋಡ್ (SC), ಐನಾಪುರ (SC-W), ಚಂದನಕೇರ (SC), ಸಲಗರಬಸಂತಪುರ (SC-W), ವೆಂಕಟಾಪುರ (SC-W) ಮತ್ತು ಶಾದಿಪುರ (SC-W) ಕ್ಷೇತ್ರಗಳಲ್ಲಿ ತಾಂಡಾಗಳ ಪ್ರಭಾವ ಮತ್ತು ಬಂಜಾರ ಸಮುದಾಯದ ಮತಗಳೇ ಹೆಚ್ಚಾಗಿವೆ. ಇದರಿಂದಾಗಿ ಮೂಲ ಪರಿಶಿಷ್ಟ ಜಾತಿಗಳಾದ ಹೊಲೆಯ, ಮಾದಿಗ ಹಾಗೂ ಭೋವಿ ಮತ್ತು ಇತರ ಸಮುದಾಯಗಳು ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
# ರೊಟೇಷನ್ ಪದ್ಧತಿ ಪಾಲಿಸಲು ಆಗ್ರಹ
ಜನಸಂಖ್ಯಾ ಹಂಚಿಕೆ ಮತ್ತು ಸಾಮಾಜಿಕ ನ್ಯಾಯದ ನೈಜ ತತ್ವಗಳ ಆಧಾರದ ಮೇಲೆ ಪ್ರಸ್ತುತ ಕರಡು ಪಟ್ಟಿಯನ್ನು ಸರ್ಕಾರ ಮರುಪರಿಶೀಲಿಸಬೇಕು. ಮೂಲ ಪರಿಶಿಷ್ಟ ಜಾತಿಯ ಜನಸಂಖ್ಯೆ ಹೆಚ್ಚಿರುವ ಐನೋಳ್ಳಿ, ದೇಗಲಮಡಿ, ಸಾಲಬೀರನಳ್ಳಿ, ಮಿರಿಯಾಣ, ಸುಲೇಪೇಟ, ಚಿಮ್ಮಯಿದಾಲಯಿ, ಕರಚಖೇಡ್, ಕನಕಪುರ ಮತ್ತು ನಿಡಗುಂದ ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ನಿಯಮಾನುಸಾರ ಮೀಸಲಾತಿಯನ್ನು ಸ್ಥಳಾಂತರಿಸಬೇಕು (ರೊಟೇಷನ್ ಮಾಡಬೇಕು) ಎಂದು ನಿಯೋಗ ಒತ್ತಾಯಿಸಿದೆ.
ಆ ಮೂಲಕ ತಳಸಮುದಾಯಗಳಿಗೆ ಆಗುತ್ತಿರುವ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಿ ಸಾಮಾಜಿಕ ನ್ಯಾಯ ಒದಗಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂಧರ್ಭದಲ್ಲಿ ಯುವ ಮುಖಂಡರಾದ ಸುನಿಲ್ ತ್ರಿಪಾಟಿ, ಅಶ್ವಥ್ ಕಟ್ಟಿಮನಿ, ಉಪಾಧ್ಯಕ್ಷರು ವಿಶ್ವನಾಥ್ ವಾಲಿಕಾರ, ನಗರ ಅಧ್ಯಕ್ಷ ನಾಗಸೇನ್ ಬೋಮ್ನಳ್ಳಿ, ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ಸಂದೀಪ್ ಗಂಗಾ, ಕೃಷ್ಣ ದೇಗಲ್ಮಡಿ, ಸುಖೆಶ್ ಭರಮ್ ಸಂಘಟನೆಯ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

 

ಪ್ರತಿನಿಧಿ: ಮಲ್ಲಿಕಾರ್ಜುನ ಭುಶೆಟ್ಟಿ

ಕನ್ನಡ ಸಾಮ್ರಾಟ್ news ಬ್ಯುರೋ ಚಿಂಚೋಳಿ

 

Share This

Facebook
X
WhatsApp
0 0 votes
Article Rating
Subscribe
Notify of
guest
0 Comments
Oldest
Newest Most Voted

ಇತ್ತೀಚಿನ ಸುದ್ದಿಗಳು