ಸುಲೇಪೇಟ್ನಲ್ಲಿ ಅದ್ಧೂರಿ ಪತ್ರಿಕಾ ದಿನಾಚರಣೆ: ಐವರು ಸಾಧಕರಿಗೆ ಪ್ರತಿಷ್ಠಿತ ‘ಸುಲೇಪೇಟ್ ರತ್ನ’ ಪ್ರಶಸ್ತಿ ಪ್ರದಾನ | ಪ್ರಜಾಪ್ರಭುತ್ವದ ಕಾವಲುಗಾರನಾಗಿ ಮಾಧ್ಯಮಗಳು ಸತ್ಯದ ಪರ ನಿಲ್ಲಲಿ: ಸಂಸದ ಸಾಗರ ಖಂಡ್ರೆ ಕರೆ!
ಸುಲೇಪೇಟ್ / ಚಿಂಚೋಳಿ (ಕಲಬುರಗಿ):
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ಧ್ವನಿ ದುರ್ಬಲವಾದಾಗಲೆಲ್ಲ ಮಾಧ್ಯಮ ಕ್ಷೇತ್ರವೇ ನೈಜ ವಿರೋಧ ಪಕ್ಷದಂತೆ ಕರ್ತವ್ಯ ನಿರ್ವಹಿಸಿ ಜನಸಾಮಾನ್ಯರ ದನಿಯಾಗಿದೆ ಎಂದು ಬೀದರ್ ಲೋಕಸಭಾ ಕ್ಷೇತ್ರದ ಸಂಸದ ಸಾಗರ ಖಂಡ್ರೆ ಅಭಿಪ್ರಾಯಪಟ್ಟರು.
ತಾಲೂಕಿನ ಸುಲೇಪೇಟ್ ಗ್ರಾಮದ ಶ್ರೀ ಮಹಾಂತೇಶ್ವರ ಕಲ್ಯಾಣ ಮಂಟಪದಲ್ಲಿ ಸ್ನೇಹಬಂಧು ಸಂಸ್ಥೆ ಸೂಲೆಪೇಟ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರಿಗೆ ‘ಸುಲೇಪೇಟ್ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆಡಳಿತಾವಧಿಯಲ್ಲೂ ಮಾಧ್ಯಮಗಳು ಸರ್ಕಾರದ ತಪ್ಪುಗಳನ್ನು, ಕಾರ್ಯವೈಖರಿಯನ್ನು ನೇರವಾಗಿ ಪ್ರಶ್ನಿಸುವ ಮೂಲಕ ಪ್ರಜಾಪ್ರಭುತ್ವದ ನೈಜ ಕಾವಲುಗಾರನಾಗಿ ಕರ್ತವ್ಯ ನಿಭಾಯಿಸಿವೆ. ಇಂದಿನ ದಿನಗಳಲ್ಲಿ ಸತ್ಯ ಮತ್ತು ವಾಸ್ತವಾಂಶಗಳನ್ನು ಜನರಿಗೆ ತಲುಪಿಸುವುದು ಪ್ರತಿಯೊಬ್ಬ ಪತ್ರಕರ್ತನ ಆದ್ಯ ಕರ್ತವ್ಯವಾಗಬೇಕು ಎಂದು ಅವರು ಕರೆ ನೀಡಿದರು.
ಪಕ್ಷಾತೀತವಾಗಿ ಸತ್ಯದ ಪರ ನಿಲ್ಲುವುದು ಪತ್ರಿಕಾ ಧರ್ಮ: ಡಾ. ಉಮೇಶ ಜಾದವ್
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಾಜಿ ಸಂಸದ ಡಾ. ಉಮೇಶ ಜಾದವ್, ಮಾಧ್ಯಮ ಕ್ಷೇತ್ರಕ್ಕೆ ಸಮಾಜವನ್ನು ತಿದ್ದುವ ಅಪಾರ ಶಕ್ತಿಯಿದೆ. ಪತ್ರಕರ್ತರು ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ರಾಜಕೀಯ ಪಕ್ಷದ ಪರವಾಗಿ ಗುರುತಿಸಿಕೊಳ್ಳದೆ, ಸದಾ ಸತ್ಯ ಮತ್ತು ನ್ಯಾಯದ ಪರವಾಗಿ ಗಟ್ಟಿಯಾಗಿ ನಿಲ್ಲಬೇಕು ಎಂದರು.
ಕೃಷಿಕ ಸಮಾಜದ ಅಧ್ಯಕ್ಷ ಬಸವರಾಜ ಪಾಟೀಲ ಮಾತನಾಡಿ, ಪತ್ರಿಕೋದ್ಯಮವು ಕೇವಲ ಬಂಡವಾಳಶಾಹಿ ಅಥವಾ ಲಾಭದ ಉದ್ದೇಶಕ್ಕೆ ಸೀಮಿತವಾಗದೆ, ಗ್ರಾಮೀಣ ಜನರ, ರೈತರ ಹಾಗೂ ಕಟ್ಟಕಡೆಯ ವ್ಯಕ್ತಿಯ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಠೋಡ್ ಮಾತನಾಡಿ, ಪತ್ರಕರ್ತರು ಹಗಲಿರುಳು ತಮ್ಮ ಪ್ರಾಣದ ಹಂಗು ತೊರೆದು ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮ ಕ್ಷೇತ್ರವು ವಿಕೇಂದ್ರೀಕರಣಗೊಂಡು ಸಮಾಜದ ವಿವಿಧ ವರ್ಗಗಳ ಧ್ವನಿಗೆ ವಿಶಾಲ ವೇದಿಕೆಯಾಗಬೇಕಾದ ತುರ್ತು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಜನಸಾಗರದ ನಡುವೆ ಸಾಧಕರಿಗೆ ‘ಸುಲೇಪೇಟ್ ರತ್ನ’ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಐವರು ಗಣ್ಯ ಸಾಧಕರಿಗೆ ಈ ಸಂದರ್ಭದಲ್ಲಿ ಪ್ರತಿಷ್ಠಿತ ‘ಸುಲೇಪೇಟ್ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು:
ಜಗನ್ನಾಥ ಶೇರಿಕಾರ – ಮಾಧ್ಯಮ ಕ್ಷೇತ್ರ
ಡಾ. ಶಶಿಕಾಂತ ಶೆಳ್ಳಗಿ – ವೈದ್ಯಕೀಯ ಕ್ಷೇತ್ರ
ಮಲ್ಲಿಕಾರ್ಜುನ ದೇಸಾಯಿ – ಕೃಷಿ ಕ್ಷೇತ್ರ
ಸಂಗಪ್ಪ ಶೆಟ್ಟಿ – ಸಾಮಾಜಿಕ ಕ್ಷೇತ್ರ
ನಿಂಗಪ್ಪ ಓರೆಕುರಬ್ (ನಿವೃತ್ತ ಪ್ರಾಂಶುಪಾಲರು) – ಶಿಕ್ಷಣ ಕ್ಷೇತ್ರ
ಪ್ರಶಸ್ತಿ ಪ್ರದಾನಕ್ಕೂ ಮುನ್ನ ಸಾಧಕರನ್ನು ಸುಲೇಪೇಟ್ನ ಬಸವೇಶ್ವರ ವೃತ್ತದಿಂದ ಶ್ರೀ ಮಹಾಂತೇಶ್ವರ ಕಲ್ಯಾಣ ಮಂಟಪದವರೆಗೆ ತೆರೆದ ವಾಹನದಲ್ಲಿ ಜನಪದ ವಾದ್ಯಮೇಳಗಳೊಂದಿಗೆ ಅದ್ಧೂರಿ ಮೆರವಣಿಗೆಯ ಮೂಲಕ ವೇದಿಕೆಗೆ ಕರೆತರಲಾಯಿತು.
ಸಾನ್ನಿಧ್ಯ ಮತ್ತು ಗಣ್ಯರ ಉಪಸ್ಥಿತಿ
ಸುಗುರ ಶ್ರೀ ಚನ್ನರುದ್ರಮುನಿ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹಿರಿಯ ಮುಖಂಡ ದಯಾನಂದ ರೆಮ್ಮಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಚಿಂಚೋಳಿ ತಾಲೂಕಿನ ಎಲ್ಲಾ ಡಿಜಿಟಲ್ ಮೀಡಿಯಾ (Digital Media) ಹಾಗೂ ಮುದ್ರಣ ಮಾಧ್ಯಮದ (Print Media) ವರದಿಗಾರರಿಗೆ ವೇದಿಕೆ ಮೇಲೆ ವಿಶೇಷ ಗೌರವ ಸನ್ಮಾನ ಮಾಡಲಾಯಿತು. ವಿಶೇಷವೆಂದರೆ, ವೇಗವಾಗಿ ಬೆಳೆಯುತ್ತಿರುವ ನಮ್ಮ ‘ಕನ್ನಡ ಸಾಮ್ರಾಟ್’ ನ್ಯೂಸ್ ಪೋರ್ಟಲ್ನ ಸಂಸ್ಥಾಪಕರು ಹಾಗೂ ಸಂಪಾದಕರಾದ ಶಿವ ಎಸ್.ಎಸ್ (Shiva SS) ಅವರಿಗೂ ಹಾಗೂ ‘ಬ್ರ್ಯಾಂಡ್ ಕರ್ನಾಟಕ’ ಡಿಜಿಟಲ್ ಮಾಧ್ಯಮದ ವರದಿಗಾರ ಹರ್ಷವರ್ಧನ್ ಅವರಿಗೂ ಸಹ ಈ ಪ್ರತಿಷ್ಠಿತ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡರಾದ ಅನಿಲ ಜಮಾದಾರ್, ಮಹಾರುದ್ರಪ್ಪ ದೇಸಾಯಿ, ತಾಹೇರ್ ಪಟೇಲ್, ಆಶೀಷ ಪವಾರ್, ಬಸವರಾಜ ಮಾಲಿ, ಮಸ್ತಾನ್ ಅಲಿ ಪಟ್ಟೆದ್ದಾರ, ಗೋಪಾಲರಾವ್ ಕಟ್ಟಿಮನಿ, ರುದ್ರಶೆಟ್ಟಿ ಪಡಶೆಟ್ಟಿ, ಶರಣು ಪಾಟೀಲ ಮೋತಕಪಳ್ಳಿ, ಮೇಘರಾಜ ರಾಠೋಡ, ಆನಂದಕುಮಾರ್ ಟೈಗರ್, ಶಿವಕುಮಾರ್ ಸೊಂತ, ಮಹೇಶ್ ಜೇಮಳಗಿ, ವಿಜಯಕುಮಾರ್ ಚಿಂತಗಿ, ಶಿವಕುಮಾರ್ ಸಜ್ಜನ, ಶಾಮರಾವ್ ಚಿಂಚೋಳಿ, ಶಿವಶರಣಪ್ಪ ಕುಂಬಾರ್, ಚಾಂದಪಾಶಾ ಮೊಮಿನ್, ಜಹೀರೋದ್ದೀನ್ ಪಟೇಲ್, ನಸೀರ ಮದರಗಿ, ರಾಮರೆಡ್ಡಿ ರುದ್ರಮುನಿ, ಮೋಯಿನ ಮೊಮಿನ್, ಸುನಿಲಕುಮಾರ್ ಕೋರಿ ರಾಮತೀರ್ಥಕರ್, ಶಿವಾನಂದ ಸ್ವಾಮಿ, ನಾಮದೇವ ಪಾಟೀಲ, ಬಾಬಣ್ಣ ಗುಲಗುಂಜಿ, ಅಬ್ದುಲ್ ಬಾಸಿದ್, ಕೆ.ವಿಂಬಾರಿ, ಪರಮೇಶ್ವರ ಪಾಟೀಲ ಸೇರಿದಂತೆ ಅಪಾರ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿದ್ದರು.ಕಾರ್ಯಕ್ರಮಕ್ಕೆ ಲಿಂಗರಾಜ ಸ್ವಾಮಿ ಸ್ವಾಗತ ಕೋರಿದರು, ಅಶೋಕ ಹೂವಿನಬಾವಿ ನಿರೂಪಿಸಿದರು ಹಾಗೂ ಸೈಯದ್ ವಸೀಮ್ ವಂದನಾರ್ಪಣೆ ಮಾಡಿದರು.

ಕನ್ನಡ ಸಾಮ್ರಾಟ್ news ಬ್ಯುರೋ ಚಿಂಚೋಳಿ










