ನಾಸಿಕ್: ಐಟಿ ಕಂಪನಿಯಲ್ಲಿ ‘ಕಾರ್ಪೊರೇಟ್ ಜಿಹಾದ್’! ಲೈಂಗಿಕ ಕಿರುಕುಳ, ಬಲವಂತದ ಮತಾಂತರ ಆರೋಪದಡಿ ಎಚ್‌ಆರ್ ಸೇರಿ 7 ಮಂದಿ ಅರೆಸ್ಟ್
ನಾಸಿಕ್ (ಮಹಾರಾಷ್ಟ್ರ): ಉದ್ಯೋಗ ಅರಸಿ ಬರುವ ಮುಗ್ಧ ಯುವತಿಯರಿಗೆ ಪ್ರಮೋಷನ್ ಆಮಿಷ ಒಡ್ಡಿ ಲೈಂಗಿಕ ಶೋಷಣೆ ಮಾಡುವುದರ ಜೊತೆಗೆ, ಯುವಕ-ಯುವತಿಯರನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಪ್ರಸಿದ್ಧ ಬಹುರಾಷ್ಟ್ರೀಯ ಐಟಿ ಕಂಪನಿಯೊಂದರ ಬಿಪಿಒ ಕಚೇರಿಯಲ್ಲಿ ಈ ಕೃತ್ಯ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಎಚ್‌ಆರ್ ಮ್ಯಾನೇಜರ್ ಮತ್ತು ಆರು ಮಂದಿ ಟೀಮ್ ಲೀಡರ್‌ಗಳು ಸೇರಿದಂತೆ ಒಟ್ಟು 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಈ ಪ್ರಕರಣದ ತನಿಖೆಗಾಗಿ ಮಹಾರಾಷ್ಟ್ರ ಸರ್ಕಾರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.
ಪ್ರಮೋಷನ್ ಆಮಿಷ, ವೀಕೆಂಡ್ ಟ್ರಿಪ್ ನೆಪದಲ್ಲಿ ಶೋಷಣೆ
ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಆರೋಪಿಗಳು ತಮ್ಮ ಅಧಿಕಾರದ ದುರ್ಬಳಕೆ ಮಾಡಿಕೊಂಡಿದ್ದಾರೆ. ಉದ್ಯೋಗಕ್ಕೆಂದು ಬಂದ ಜೂನಿಯರ್ ಯುವತಿಯರನ್ನು ಮೊದಲು ವಿಶ್ವಾಸಕ್ಕೆ ತೆಗೆದುಕೊಂಡು, ನಂತರ ಅವರಿಗೆ ಪ್ರಮೋಷನ್ ಹಾಗೂ ದೊಡ್ಡ ಅವಕಾಶಗಳ ಆಮಿಷವೊಡ್ಡುತ್ತಿದ್ದರು. ಬಳಿಕ ‘ವೀಕೆಂಡ್ ಟ್ರಿಪ್’ ಹೆಸರಿನಲ್ಲಿ ಐಷಾರಾಮಿ ರೆಸಾರ್ಟ್ ಹಾಗೂ ವಾಟರ್ ಪಾರ್ಕ್‌ಗಳಿಗೆ ಕರೆದೊಯ್ದು ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.
ಬದಲಾದ ವರ್ತನೆ, ಬಯಲಾಯ್ತು ಕರಾಳ ಸತ್ಯ!
ಕೆಲವು ಮಹಿಳಾ ಉದ್ಯೋಗಿಗಳ ದೈನಂದಿನ ಜೀವನಶೈಲಿಯಲ್ಲಿ ಅಸಾಮಾನ್ಯ ಬದಲಾವಣೆಗಳು ಕಾಣಿಸಿಕೊಂಡಾಗ ಈ ಸಂಪೂರ್ಣ ಜಾಲದ ಸುಳಿವು ಪೋಷಕರಿಗೆ ಸಿಕ್ಕಿದೆ. ಹಿಂದೂ ಯುವತಿಯರು ರಂಜಾನ್ ತಿಂಗಳಲ್ಲಿ ಉಪವಾಸ (ರೋಜಾ) ಇರಲು ಪ್ರಾರಂಭಿಸಿದ್ದರು. ಮೇಕಪ್, ಲಿಪ್‌ಸ್ಟಿಕ್ ಹಚ್ಚುವುದನ್ನು ಬಿಟ್ಟಿದ್ದರಲ್ಲದೆ, ತಮ್ಮ ಹಳೆಯ ಸ್ನೇಹಿತೆಯರಿಂದಲೂ ಅಂತರ ಕಾಯ್ದುಕೊಳ್ಳುತ್ತಿದ್ದರು. ಮಕ್ಕಳ ವರ್ತನೆಯಿಂದ ಕಂಗಾಲಾದ ಪೋಷಕರು ಪೊಲೀಸರ ಮೊರೆ ಹೋದಾಗ ಪ್ರಕರಣದ ಕರಾಳ ಮುಖ ಅನಾವರಣಗೊಂಡಿದೆ. ಇದಲ್ಲದೆ, ಹಿಂದೂ ಯುವಕನೊಬ್ಬನಿಗೆ ಬಲವಂತವಾಗಿ ನಮಾಜ್ ಮಾಡಿಸಿ, ಗೋಮಾಂಸ (ಬೀಫ್) ತಿನ್ನಿಸಿ ಮತಾಂತರ ಮಾಡಲು ಯತ್ನಿಸಿದ ಗಂಭೀರ ಆರೋಪವೂ ಕೇಳಿಬಂದಿದೆ.
ವೇಷ ಮರೆಸಿಕೊಂಡು ಕಾರ್ಯಾಚರಣೆ ನಡೆಸಿದ ಮಹಿಳಾ ಪೊಲೀಸರು
ಇದೊಂದು ಅತ್ಯಂತ ವ್ಯವಸ್ಥಿತ ಜಾಲವಾಗಿದ್ದರಿಂದ ಸಾಕ್ಷ್ಯಗಳನ್ನು ಕಲೆಹಾಕುವುದು ಪೊಲೀಸರಿಗೆ ಸವಾಲಾಗಿತ್ತು. ಹೀಗಾಗಿ, ಮಹಿಳಾ ಪೊಲೀಸ್ ಅಧಿಕಾರಿಗಳು ವೇಷ ಮರೆಸಿಕೊಂಡು (Undercover) ಅದೇ ಕಂಪನಿಯಲ್ಲಿ ಉದ್ಯೋಗಿಗಳಾಗಿ ಕೆಲಸಕ್ಕೆ ಸೇರಿದ್ದರು. ಆರೋಪಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರು, ಸಂತ್ರಸ್ತ ಯುವತಿಯರ ವಿಶ್ವಾಸ ಗಳಿಸಿ ಅವರು ಧೈರ್ಯವಾಗಿ ಮುಂದೆ ಬಂದು ದೂರು ನೀಡುವಂತೆ ಮಾಡುವಲ್ಲಿ ಯಶಸ್ವಿಯಾದರು.
ಸಂತ್ರಸ್ತರ ಸಂಖ್ಯೆ 50ಕ್ಕೂ ಹೆಚ್ಚು?
ಘಟನೆ ಖಂಡಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಂಪನಿಯ ಆವರಣದಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಶುಕ್ರವಾರ ಎಲ್ಲಾ 7 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಾಸಿಕ್ ಪೊಲೀಸರು ಈವರೆಗೆ 9 ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದು, ಸಂತ್ರಸ್ತರ ಸಂಖ್ಯೆ 50ಕ್ಕೂ ಹೆಚ್ಚಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
ಇದು ‘ಕಾರ್ಪೊರೇಟ್ ಜಿಹಾದ್’ ಎಂದ ಸಚಿವ ನಿತೇಶ್ ರಾಣೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಕ್ಯಾಬಿನೆಟ್ ಸಚಿವ ನಿತೇಶ್ ರಾಣೆ, “ಇದೊಂದು ‘ಕಾರ್ಪೊರೇಟ್ ಜಿಹಾದ್’. ಪೊಲೀಸ್ ತನಿಖೆಯಿಂದ ಈ ಷಡ್ಯಂತ್ರದ ಹಿಂದಿರುವ ಮಾಸ್ಟರ್ ಮೈಂಡ್ ಯಾರು ಮತ್ತು ಇದಕ್ಕೆ ಎಲ್ಲಿಂದ ಫಂಡಿಂಗ್ ಬರುತ್ತಿದೆ ಎಂಬುದು ಶೀಘ್ರದಲ್ಲೇ ಬಹಿರಂಗವಾಗಲಿದೆ” ಎಂದು ಗುಡುಗಿದ್ದಾರೆ






