#ಚಿಂಚೋಳಿ ಚೆಟ್ಟಿನಾಡ್ ಸಿಮೆಂಟ್ ಎದುರು ಪ್ರತಿಭಟನೆ: ಸ್ಥಳೀಯರ ಸಮಸ್ಯೆಗಳಿಗೆ ಪರಿಹಾರ ಕೋರಿ ಮಾರುತಿ ಗಂಜಗಿರಿ ನಿಯೋಗದಿಂದ ಮನವಿ !
**ಕಲಬುರಗಿ / ಚಿಂಚೋಳಿ (ಕನ್ನಡ ಸಾಮ್ರಾಟ್ ವರದಿ):**
ನೆಲ ನಮ್ಮದು, ಜಲ ನಮ್ಮದು, ಇಲ್ಲಿನ ಧೂಳು-ಹೊಗೆ ತಿನ್ನುತ್ತಾ ಬದುಕುತ್ತಿರುವ ಜನವೂ ನಮ್ಮವರೇ. ಆದರೆ ಕೈಗಾರಿಕೆಯ ಲಾಭ ಮಾತ್ರ ಹೊರಗಿನವರಿಗಾ? ಹೀಗೊಂದು ತೀವ್ರ ಆಕ್ರೋಶದ ಧ್ವನಿ ಈಗ ಕಲಬುರಗಿ ಜಿಲ್ಲೆಯ ಗಡಿ ತಾಲೂಕು ಚಿಂಚೋಳಿಯ ಚೆಟ್ಟಿನಾಡ್ ಸಿಮೆಂಟ್ ಕಾರ್ಖಾನೆಯ ಮುಂಭಾಗದಲ್ಲಿ ಪ್ರತಿಧ್ವನಿಸುತ್ತಿದೆ. ಸ್ಥಳೀಯ ಟಿಪ್ಪರ್-ಲಾರಿ ಮಾಲೀಕರು, ವಾಹನ ಚಾಲಕರು ಹಾಗೂ ಕಾರ್ಮಿಕರು ತಮ್ಮ ನ್ಯಾಯಯುತ ಹಕ್ಕುಗಳಿಗಾಗಿ ಸಿಡಿದೆದ್ದಿದ್ದು, ಕಾರ್ಖಾನೆಯ ಗೇಟ್ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿ ಆಡಳಿತ ಮಂಡಳಿಗೆ ನೇರ ಎಚ್ಚರಿಕೆಯ ಮನವಿ ಪತ್ರ ಸಲ್ಲಿಸಿದ್ದಾರೆ.
ಮೂಲನಿವಾಸಿ ವಾಹನ ಚಾಲಕರ ಸಂಘ ಹಾಗೂ ಲಾರಿ ಮಾಲೀಕರ ಸಂಘದ ಜಂಟಿ ನೇತೃತ್ವದಲ್ಲಿ ಜಮಾಯಿಸಿದ ನೂರಾರು ವಾಹನ ಮಾಲೀಕರು ಮತ್ತು ಸ್ಥಳೀಯ ಯುವಕರು, “ಸ್ಥಳೀಯರಿಗೆ ಮೊದಲ ಆದ್ಯತೆ ಸಿಗಲೇಬೇಕು, ಕಾರ್ಮಿಕರ ಜೀವಕ್ಕೆ ಭದ್ರತೆ ನೀಡಲೇಬೇಕು” ಎಂದು ಕಾರ್ಖಾನೆಯ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.
### ಬ್ಯಾಂಕ್ ಕಂತು ಕಟ್ಟಲಾಗದೆ ಕಣ್ಣೀರಿಡುತ್ತಿರುವ ಸ್ಥಳೀಯ ಮಾಲೀಕರು
ಚಿಂಚೋಳಿ ಭಾಗದ ನೂರಾರು ಕುಟುಂಬಗಳು ಬ್ಯಾಂಕುಗಳಲ್ಲಿ ಸಾಲ ಮಾಡಿ, ಮನೆ-ಮಠ ಒತ್ತೆ ಇಟ್ಟು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಟಿಪ್ಪರ್ ಹಾಗೂ ಲಾರಿಗಳನ್ನು ಖರೀದಿಸಿವೆ. ಡೀಸೆಲ್ ದರ ಏರಿಕೆ, ವಾಹನ ನಿರ್ವಹಣೆ, ಇನ್ಶೂರೆನ್ಸ್ ಹಾಗೂ ತೆರಿಗೆಗಳ ಹೊರೆಯನ್ನು ಹೊತ್ತು ಹಗಲಿರುಳು ದುಡಿಯುತ್ತಿರುವ ಈ ಮಣ್ಣಿನ ಮಕ್ಕಳಿಗೆ ಕಾರ್ಖಾನೆಯಲ್ಲಿ ಸಾರಿಗೆ ಕೆಲಸ ನೀಡದೆ ಕಡೆಗಣಿಸಲಾಗುತ್ತಿದೆ ಎಂಬುದು ಪ್ರತಿಭಟನಾಕಾರರ ಪ್ರಮುಖ ಆರೋಪ.
ಸ್ಥಳೀಯ ವಾಹನಗಳಿಗೆ ನಿಯಮಿತವಾಗಿ ಕಚ್ಚಾ ಸಾಮಗ್ರಿಗಳ ಸಾರಿಗೆ ಕೆಲಸ ನೀಡದಿದ್ದರೆ, ಸಾಲದ ಕಂತು ಕಟ್ಟಲಾಗದೆ ವಾಹನ ಮಾಲೀಕರು ಆತ್ಮಹತ್ಯೆಯಂತಹ ಕಠಿಣ ಹಾದಿ ಹಿಡಿಯುವ ದಿನಗಳು ದೂರವಿಲ್ಲ ಎಂದು ಮುಖಂಡರು ಎಚ್ಚರಿಸಿದ್ದಾರೆ.
# ಅಕ್ರಮ ಸಾಗಣೆ, ಓವರ್ಲೋಡ್ ಹಾಗೂ ರಸ್ತೆ ಸುರಕ್ಷತೆಯ ಆತಂಕ
ಕಾರ್ಖಾನೆಗೆ ಕಚ್ಚಾ ಸಾಮಗ್ರಿ ಪೂರೈಸುವ ವ್ಯವಸ್ಥೆಯಲ್ಲಿ ಭಾರೀ ಅಕ್ರಮಗಳು ನಡೆಯುತ್ತಿವೆ ಎಂದು ಸಂಘಟನೆಗಳು ಗಂಭೀರ ಆರೋಪ ಮಾಡಿವೆ. ಗಣಿ ಇಲಾಖೆಯ ರಾಯಧನ (Royalty) ನಿಯಮಗಳನ್ನು ಗಾಳಿಗೆ ತೂರಿ ಓವರ್ಲೋಡ್ ವಾಹನಗಳು ರಾಜಾರೋಷವಾಗಿ ಓಡಾಡುತ್ತಿವೆ. ಅನುಮತಿ ಪಡೆದ ಅಧಿಕೃತ ಜಾಗದಿಂದ ಕೆಂಪು ಮಣ್ಣು ತರದೆ ಅನ್ಯ ಮೂಲಗಳಿಂದ ತರುತ್ತಿರುವ ವಾಹನಗಳನ್ನು ತಕ್ಷಣ ತಡೆಹಿಡಿಯಬೇಕು ಎಂದು ಆಗ್ರಹಿಸಲಾಗಿದೆ.
ಅಲ್ಲದೆ, ಪರರಾಜ್ಯ ಮತ್ತು ಹೊರ ಜಿಲ್ಲೆಯ ಕೆಲ ಚಾಲಕರು ಮದ್ಯಪಾನ ಮತ್ತು ಮಾದಕ ವಸ್ತುಗಳ ಅಮಲಿನಲ್ಲಿ ಅತಿವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದು, ಗ್ರಾಮಸ್ಥರು, ರೈತರು ಹಾಗೂ ಶಾಲಾ ಮಕ್ಕಳು ರಸ್ತೆಯಲ್ಲಿ ಸಂಚರಿಸಲು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
# ಧೂಳಿನ ನಡುವೆ ಸಾಯುತ್ತಿರುವ ಪ್ಯಾಕಿಂಗ್ ಕಾರ್ಮಿಕರು: ಸುರಕ್ಷತೆ ಎಲ್ಲಿ?
ಕಾರ್ಖಾನೆಯ ಪ್ಯಾಕಿಂಗ್ ವಿಭಾಗದಲ್ಲಿ ಕೆಲಸ ಮಾಡುವ ಸ್ಥಳೀಯ ಕಾರ್ಮಿಕರ ಸ್ಥಿತಿ ದಯನೀಯವಾಗಿದೆ. ಕನಿಷ್ಠ ಸುರಕ್ಷತಾ ಸಾಧನಗಳೂ ಇಲ್ಲದೆ ಸಿಮೆಂಟ್ ಧೂಳಿನಲ್ಲಿ ದುಡಿಯುತ್ತಿರುವ ಕಾರ್ಮಿಕರು ಉಸಿರಾಟದ ತೊಂದರೆ, ಶ್ವಾಸಕೋಶದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇವರಿಗೆ ತಕ್ಷಣ ಆಧುನಿಕ ಸುರಕ್ಷತಾ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ‘ಸಮಾನ ಕೆಲಸಕ್ಕೆ ಸಮಾನ ವೇತನ’ ನಿಯಮ ಜಾರಿಗೊಳಿಸಬೇಕು ಎಂದು ಆಗ್ರಹಿಸಲಾಯಿತು.
# ಸಂಘಟನೆಗಳ ಪ್ರಮುಖ 11 ಹಕ್ಕೊತ್ತಾಯಗಳು
1. **ಸ್ಥಳೀಯರಿಗೆ ಪ್ರಥಮ ಆದ್ಯತೆ:** ಕಚ್ಚಾ ಸಾಮಗ್ರಿ ಸರಬರಾಜು, ಲೋಡಿಂಗ್ ಮತ್ತು ಅನ್ಲೋಡಿಂಗ್ನಲ್ಲಿ ಸ್ಥಳೀಯ ವಾಹನಗಳಿಗೆ ಮೊದಲ ಅವಕಾಶ ನೀಡಬೇಕು.
2. **ಓವರ್ಲೋಡ್ಗೆ ಬ್ರೇಕ್:** ಗಣಿ ಇಲಾಖೆಯ ಅನುಮತಿಗಿಂತ ಅಧಿಕ ತೂಕ ಹೊತ್ತು ತರುವ ವಾಹನಗಳಿಗೆ ಕಾರ್ಖಾನೆ ಪ್ರವೇಶ ನಿಷೇಧಿಸಬೇಕು.
3. **ಅನಧಿಕೃತ ಕೆಂಪು ಮಣ್ಣು ಸಾಗಣೆ ತಡೆ:** ರಾಯಲ್ಟಿ ನಿಯಮ ಉಲ್ಲಂಘಿಸಿ ಬರುವ ವಾಹನಗಳನ್ನು ತಡೆದು, ಕೇವಲ ಅಧಿಕೃತ ಟಿಪ್ಪರ್ಗಳಿಗೆ ಮಾತ್ರ ಪ್ರವೇಶ ಕಲ್ಪಿಸಬೇಕು.
4. **ಅಪಘಾತ ತಡೆಗೆ ಕ್ರಮ:** ಅಮಲಿನಲ್ಲಿ ಅತಿವೇಗದ ಚಾಲನೆ ಮಾಡುವ ಹೊರಗಿನ ವಾಹನಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕು.
5. **ಪ್ಯಾಕಿಂಗ್ ವಿಭಾಗದ ಕಾರ್ಮಿಕರ ಸುರಕ್ಷತೆ:** ಸಿಮೆಂಟ್ ಧೂಳಿನಿಂದ ರಕ್ಷಣೆ ಪಡೆಯಲು ಆರೋಗ್ಯ ಮತ್ತು ರಕ್ಷಣಾ ಕವಚಗಳನ್ನು ಒದಗಿಸಬೇಕು.
6. **ಸ್ಥಳೀಯ ಯುವಕರಿಗೆ ಉದ್ಯೋಗ:** ಚಿಂಚೋಳಿ ತಾಲೂಕಿನ ನಿರುದ್ಯೋಗಿ ಸ್ಥಳೀಯ ಯುವಕರಿಗೆ ಕಾರ್ಖಾನೆಯಲ್ಲಿ ಉದ್ಯೋಗಾವಕಾಶ ನೀಡಬೇಕು.
7. **ಪಾರದರ್ಶಕ ಗುತ್ತಿಗೆ ವ್ಯವಸ್ಥೆ:** ಸಾರಿಗೆ ಗುತ್ತಿಗೆ ಹಾಗೂ ಲೋಡಿಂಗ್ ಹಂಚಿಕೆಯಲ್ಲಿ ಸ್ಥಳೀಯರ ಹಿತ ಕಾಯುವ ಪಾರದರ್ಶಕತೆ ಇರಬೇಕು.
8. **ಚಾಲಕರಿಗೆ ಕನಿಷ್ಠ ಸೌಲಭ್ಯ:** ಕಾರ್ಖಾನೆ ಆವರಣದಲ್ಲಿ ವಾಹನ ಚಾಲಕರಿಗೆ ವಿಶ್ರಾಂತಿ, ಕುಡಿಯುವ ನೀರು ಮತ್ತು ಶೌಚಾಲಯ ಒದಗಿಸಬೇಕು.
9. **ಸಮಸ್ಯೆಗಳಿಗೆ ಶಾಶ್ವತ ಪರಿಹಾರ:** ಸ್ಥಳೀಯ ವಾಹನ ಮಾಲೀಕರು ಮತ್ತು ಚಾಲಕರ ಸಮಸ್ಯೆಗಳಿಗೆ ಶಾಶ್ವತ ನೀತಿ ರೂಪಿಸಬೇಕು.
10. **ಕಾರ್ಮಿಕ ಹಕ್ಕುಗಳು:** ಕಾರ್ಮಿಕ ಕಾಯ್ದೆ ಪ್ರಕಾರ ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸಾಮಾಜಿಕ ಭದ್ರತೆ ನೀಡಬೇಕು.
11. **ಲಿಖಿತ ಒಪ್ಪಂದ:** ಸಂಘಟನೆಗಳ ಜೊತೆ ಆಡಳಿತ ಮಂಡಳಿ ತುರ್ತು ಸಭೆ ನಡೆಸಿ, ಕೈಗೊಳ್ಳುವ ಕ್ರಮಗಳ ಬಗ್ಗೆ ಕಾಲಮಿತಿಯೊಳಗೆ ಲಿಖಿತ ಭರವಸೆ ನೀಡಬೇಕು.
# ಜಿಲ್ಲಾಡಳಿತದ ಕದ ತಟ್ಟುವ ಎಚ್ಚರಿಕೆ
ಈ ಕುರಿತು ಮಾತನಾಡಿದ ಸಂಘಟನೆಯ ಪ್ರಮುಖರು, “ಕಾರ್ಖಾನೆಯ ಬೆಳವಣಿಗೆಗೆ ನಮ್ಮ ವಿರೋಧವಿಲ್ಲ. ಆದರೆ ಕಾರ್ಖಾನೆ ಬೆಳೆಯುವ ನೆಪದಲ್ಲಿ ಇಲ್ಲಿನ ಮಣ್ಣಿನ ಮಕ್ಕಳ ಬದುಕು ಬೀದಿಗೆ ಬೀಳಬಾರದು. ಆಡಳಿತ ಮಂಡಳಿ ತಕ್ಷಣ ನಮ್ಮೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸದಿದ್ದರೆ, ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಗ್ರ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ,” ಎಂದು ನೇರವಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮೂಲನಿವಾಸಿ ವಾಹನ ಚಾಲಕರ ಸಂಘದ ಅಧ್ಯಕ್ಷ ಮಾರುತಿ ಗಂಜಗಿರಿ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಮಸೂದ್ ಸೌದಾಗರ್, ಕಾರ್ಯದರ್ಶಿ ಬಾಬುಮಿಯ್ಯಾ, ಉಪಾಧ್ಯಕ್ಷ ಮಹೇಶ ಕುಸರಂಪಳ್ಳಿ, ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ಮೋಹನ ಐನಾಪೂರ, ಪ್ರಮುಖರಾದ ಮುಜೀಬ್ ಎಮ್.ಎಮ್.ಸಿ, ಪ್ರಕಾಶ್ ಭಕ್ತಂಪಳ್ಳಿ, ಗೋವಿಂದ, ಅಮರನಾಥ ಹೂವಿನಬಾವಿ, ಮೊಬಿನ್, ಪಿಂಟು ಶಿಂಧೆ, ಮತೀನ್, ಸದ್ದಾಂ, ಶಿವುಕುಮಾರ ಜಾಬಶೆಟ್ಟಿ, ಸಂತೋಷ, ದಾವುದ್, ಮೋಗಲಪ್ಪಾ ಬೇಡಕಪಳ್ಳಿ, ಅಶೋಕ, ಸುರೇಶ, ಕಮಲಕರ್, ಶಾಂತಕುಮಾರ್, ಜೈ ಭೀಮ್, ಮಿಥುನ್, ಅನ್ಸಾರ್, ಶಿವರಾಜ್, ಮಾರುತಿ, ಅಹೆಮದ್, ಲೋಕೇಶ್, ತಾನಾಜೀ, ನರಸಿಮ್ಲು, ದಿಲೀಪ್ ಸೇರಿದಂತೆ ನೂರಾರು ವಾಹನ ಮಾಲೀಕರು ಮತ್ತು ಚಾಲಕರು ಉಪಸ್ಥಿತರಿದ್ದರು.

ಕನ್ನಡ ಸಾಮ್ರಾಟ್ news ಬ್ಯುರೋ ಚಿಂಚೋಳಿ










