**ಕನ್ನಡ ಸಾಮ್ರಾಟ್ ವಿಶೇಷ ವರದಿ**
## ಸರ್ಕಾರದಿಂದ ಅಧಿಕೃತ ಮಧ್ವಾಚಾರ್ಯ ಜಯಂತಿ ಘೋಷಣೆ: ಸನಾತನ ಸಂಸ್ಕೃತಿಯ ರಕ್ಷಣೆಗೆ ಸರ್ಕಾರದ ದಿಟ್ಟ ಹೆಜ್ಜೆ ಎಂದ ಮುಕುಂದ ದೇಶಪಾಂಡೆ
**ಕಲಬುರಗಿ:
ಭಾರತೀಯ ದಾರ್ಶನಿಕ ಪರಂಪರೆಯಲ್ಲಿ ಕ್ರಾಂತಿಕಾರಿ ತತ್ವಾದರ್ಶಗಳನ್ನು ಬಿತ್ತಿದ, ದ್ವೈತ ಸಿದ್ಧಾಂತದ ಪ್ರವರ್ತಕ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಇನ್ನು ಮುಂದೆ ಪ್ರತಿ ವರ್ಷ ಅಕ್ಟೋಬರ್ 21ರಂದು ರಾಜ್ಯಾದ್ಯಂತ ಸರ್ಕಾರದ ವತಿಯಿಂದಲೇ ಅಧಿಕೃತವಾಗಿ ಆಚರಿಸಲು ಹೊರಡಿಸಿರುವ ಐತಿಹಾಸಿಕ ಆದೇಶಕ್ಕೆ ನಾಡಿನಾದ್ಯಂತ ಅಪಾರ ಹರ್ಷ ವ್ಯಕ್ತವಾಗಿದೆ. ರಾಜ್ಯ ಸರ್ಕಾರದ ಈ ಮಹತ್ವದ ನಿರ್ಧಾರವನ್ನು ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಮುಕ್ತಕಂಠದಿಂದ ಸ್ವಾಗತಿಸಿದ್ದು, ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ ಹರ್ಷ ಹಂಚಿಕೊಂಡ ಅಖಿಲ ಭಾರತ ಬ್ರಾಹ್ಮಣ ಮಹಾಸಭಾದ ಕಲಬುರಗಿ ಜಿಲ್ಲಾ ಉಪಾಧ್ಯಕ್ಷ ಮುಕುಂದ ದೇಶಪಾಂಡೆ, “ಭಾರತದ ಆಧ್ಯಾತ್ಮಿಕ ಹಾಗೂ ತಾತ್ವಿಕ ಚಿಂತನೆಯನ್ನು ಅತ್ಯಂತ ಪ್ರಭಾವಶಾಲಿಯಾಗಿ ರೂಪಿಸಿದ ಮೂರನೇ ಪ್ರಮುಖ ಆಚಾರ್ಯರಾದ ಶ್ರೀ ಮಧ್ವಾಚಾರ್ಯರು (ಕ್ರಿ.ಶ 1238–1317) ಕರುನಾಡಿನ ಅನರ್ಘ್ಯ ರತ್ನ. ಅವರ ಜಯಂತಿಯನ್ನು ಸರ್ಕಾರಿ ಮಟ್ಟದಲ್ಲಿ ಆಚರಿಸಲು ಮುಂದಾಗಿರುವುದು ಸನಾತನ ಧರ್ಮ ಹಾಗೂ ಕನ್ನಡ ಸಾಂಸ್ಕೃತಿಕ ಪರಂಪರೆಯ ರಕ್ಷಣೆಗೆ ಇಟ್ಟ ದಿಟ್ಟ ಹೆಜ್ಜೆಯಾಗಿದೆ,” ಎಂದು ತಿಳಿಸಿದರು.
### ಹರಿದಾಸ ಪರಂಪರೆ ಮತ್ತು ಜಾಗತಿಕ ಪ್ರಭಾವಕ್ಕೆ ಮುನ್ನುಡಿ
ಶ್ರೀ ಮಧ್ವಾಚಾರ್ಯರು ಕೇವಲ ಒಬ್ಬ ದಾರ್ಶನಿಕರಾಗಿ ಉಳಿಯದೆ, ಕನ್ನಡ ನಾಡಿನ ಸಾಂಸ್ಕೃತಿಕ ಚೈತನ್ಯ ಶಕ್ತಿಯಾಗಿ ಬೆಳೆದವರು. ಅವರ ಭಕ್ತಿಪಂಥ ಮತ್ತು ದ್ವೈತ ದರ್ಶನದ ಪ್ರೇರಣೆಯಿಂದಲೇ ಕನ್ನಡ ನೆಲದಲ್ಲಿ ಭವ್ಯ ಹರಿದಾಸ ಪರಂಪರೆ ಜನ್ಮತಾಳಿತು. ಕ್ಲಿಷ್ಟವಾಗಿದ್ದ ವೇದಾಂತದ ಸಾರವನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಮೂಲಕ ಸಾಹಿತ್ಯ, ಸಂಗೀತ, ಕಲೆ ಮತ್ತು ಅಧ್ಯಾತ್ಮ ಲೋಕಕ್ಕೆ ಹೊಸ ಆಯಾಮ ನೀಡಿದ ಕೀರ್ತಿ ಮಧ್ವಾಚಾರ್ಯರ ಸಿದ್ಧಾಂತಕ್ಕೆ ಸಲ್ಲುತ್ತದೆ. ಅಷ್ಟೇ ಅಲ್ಲದೆ, ಇಂದು ಜಗದ್ವಿಖ್ಯಾತವಾಗಿರುವ ‘ಇಸ್ಕಾನ್’ (ISKCON) ಸಂಸ್ಥೆಯ ಭಕ್ತಿ ಆಂದೋಲನದ ಹಿಂದೆಯೂ ಮಧ್ವ ಪರಂಪರೆಯ ಪ್ರಭಾವ ಅಗಾಧವಾಗಿದೆ ಎಂದು ಅವರು ಸ್ಮರಿಸಿದರು.
# ಯುವ ಪೀಳಿಗೆಗೆ ಪ್ರೇರಣೆಯಾಗಲಿರುವ ಸರ್ಕಾರದ ನಡೆ
“ಮಧ್ವಾಚಾರ್ಯರ ವೈಚಾರಿಕ ಹಾಗೂ ಸಮಗ್ರ ದೃಷ್ಟಿಕೋನ ಕೇವಲ ಇತಿಹಾಸದ ಪುಟಗಳಿಗೆ ಸೀಮಿತವಾಗದೆ, ಇಂದಿನ ಯುವ ಪೀಳಿಗೆಗೆ ತಲುಪಬೇಕಾದ ತುರ್ತು ಅಗತ್ಯವಿದೆ. ಆಚಾರ್ಯರ ಜಯಂತಿಯನ್ನು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸುವ ಸರ್ಕಾರದ ತೀರ್ಮಾನ ಯುವಜನರಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ,” ಎಂದು ಮುಕುಂದ ದೇಶಪಾಂಡೆ ಅಭಿಪ್ರಾಯಪಟ್ಟರು.
ಸಮಾಜದ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, ಅಧಿಕೃತ ಆದೇಶ ಜಾರಿಗೆ ತಂದ ರಾಜ್ಯ ಸರ್ಕಾರಕ್ಕೆ ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ಪರವಾಗಿ ಅವರು ಮತ್ತೊಮ್ಮೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ವರದಿ:** ಮಲ್ಲಿಕಾರ್ಜುನ ಭೂಶೆಟ್ಟಿ, ಚಿಂಚೋಳಿ (ಕನ್ನಡ ಸಾಮ್ರಾಟ್ ನ್ಯೂಸ್ ನೆಟ್ವರ್ಕ್)










