Home » ನ್ಯೂಸ್ » Kalaburgi » ಕಲಬುರಗಿಗೆ ‘ಬರ’ಗಾಲದ ಬರೆ: ಬರಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಭುಗಿಲೆದ್ದ ಆಕ್ರೋಶ, ಉಪವಾಸ ಸತ್ಯಾಗ್ರಹದ ಎಚ್ಚರಿಕೆ!

ಕಲಬುರಗಿಗೆ ‘ಬರ’ಗಾಲದ ಬರೆ: ಬರಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಭುಗಿಲೆದ್ದ ಆಕ್ರೋಶ, ಉಪವಾಸ ಸತ್ಯಾಗ್ರಹದ ಎಚ್ಚರಿಕೆ!

ಕಲಬುರಗಿಗೆ ‘ಬರ’ಗಾಲದ ಬರೆ: ಬರಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಭುಗಿಲೆದ್ದ ಆಕ್ರೋಶ, ಉಪವಾಸ ಸತ್ಯಾಗ್ರಹದ ಎಚ್ಚರಿಕೆ!

ಕಲಬುರಗಿ: ಕಲ್ಯಾಣ ಕರ್ನಾಟಕದ ಜೀವನಾಡಿ ಕಲಬುರಗಿ ಜಿಲ್ಲೆಯನ್ನು ರಾಜ್ಯ ಸರ್ಕಾರ ಬರಗಾಲ ಪಟ್ಟಿಯಿಂದ ಕೈಬಿಟ್ಟಿರುವುದು ಈ ಭಾಗದ ರೈತರ ಕಣ್ಣೀರಿಗೆ ಹಾಗೂ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಎಸಿ ಕೊಠಡಿಯಲ್ಲಿ ಕುಳಿತು ಸಿದ್ಧಪಡಿಸಿದ ಅವೈಜ್ಞಾನಿಕ ವರದಿಯನ್ನು ಬದಿಗೊತ್ತಿ, ವಾಸ್ತವ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿ ಕಲಬುರಗಿಯನ್ನು ತಕ್ಷಣವೇ ‘ಬರಪೀಡಿತ ಜಿಲ್ಲೆ’ ಎಂದು ಘೋಷಿಸಬೇಕು. ಇಲ್ಲವಾದಲ್ಲಿ ಉಗ್ರ ‘ಉಪವಾಸ ಸತ್ಯಾಗ್ರಹ’ ಹಮ್ಮಿಕೊಳ್ಳಲಾಗುವುದು ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷರಾದ ಗೌತಮ ವೈಜನಾಥ ಪಾಟೀಲ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
​ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಸಮಿತಿಯು ತುರ್ತು ಮನವಿಯೊಂದನ್ನು ರವಾನಿಸಿದ್ದು, ರೈತರ ದಯನೀಯ ಸ್ಥಿತಿಯತ್ತ ಸರ್ಕಾರದ ಗಮನ ಸೆಳೆದಿದೆ.
1972ರ ಬಳಿಕ ಕಂಡರಿಯದ ಭೀಕರ ಬರ:
ಕಳೆದ 50 ವರ್ಷಗಳಲ್ಲಿ (1972ರ ನಂತರ) ಕಂಡುಬರದಂತಹ ಭೀಕರ ಬರಗಾಲಕ್ಕೆ ಕಲಬುರಗಿ ಹಾಗೂ ಹೈದರಾಬಾದ್ ಕರ್ನಾಟಕ ಭಾಗ ತತ್ತರಿಸಿದೆ. ಈ ವರ್ಷ ವಾಡಿಕೆಗಿಂತ ಶೇ. 70ರಷ್ಟು ಮಳೆ ಕೊರತೆಯಾಗಿದ್ದು, ಭೂಮಿ ಬಾಯ್ಬಿಟ್ಟಿದೆ. ಅಂತರ್ಜಲ ಪಾತಾಳಕ್ಕೆ ಕುಸಿದಿದ್ದು, ಕೊಳವೆ ಬಾವಿಗಳು ಬತ್ತಿ ಹೋಗಿವೆ. ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಬಿತ್ತನೆ ಮಾಡಿದ ಬೆಳೆಗಳು ಒಣಗಿ ಕರಕಲಾಗುತ್ತಿದ್ದರೆ, ಮಳೆಯಿಲ್ಲದೆ ಬಿತ್ತನೆ ಮಾಡಲಾಗದ ರೈತರು ಆಕಾಶ ನೋಡುತ್ತಾ ಕಣ್ಣೀರು ಹಾಕುವಂತಹ ದಯನೀಯ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಇಂತಹ ಗಂಭೀರ ಪರಿಸ್ಥಿತಿಯಲ್ಲಿಯೂ ಸರ್ಕಾರ ಕಲಬುರಗಿಯನ್ನು ಬರಪಟ್ಟಿಯಿಂದ ಹೊರಗಿಟ್ಟಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಅಧಿಕಾರಿಗಳ ಅಂಕಿ-ಅಂಶಗಳ ವಿರುದ್ಧ ಅಸಮಾಧಾನ:
“ಸರ್ಕಾರದ ಬರ ಘೋಷಣೆ ಹಾಗೂ ಮೌಲ್ಯಮಾಪನವು ನೆಲಮಟ್ಟದ ನೈಜ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತಿಲ್ಲ. ಕೇವಲ ಕಚೇರಿಯ ಕಡತಗಳು ಹಾಗೂ ಅಂಕಿ-ಅಂಶಗಳ ಆಧಾರದ ಮೇಲೆ ಬರ ಘೋಷಣೆ ಮಾಡುವುದು ಅಮಾನವೀಯ. ಅಧಿಕಾರಿಗಳು ರೈತರ ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಿ ಮರುಮೌಲ್ಯಮಾಪನ ಮಾಡಬೇಕು” ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷರಾದ ಗೌತಮ ವೈಜನಾಥ ಪಾಟೀಲ ಆಗ್ರಹಿಸಿದ್ದಾರೆ.
ಸರ್ಕಾರದ ಮುಂದಿರುವ ಪ್ರಮುಖ ಬೇಡಿಕೆಗಳು:
ತುರ್ತು ಮರುಪರಿಶೀಲನೆ: ಕಲಬುರಗಿ ಜಿಲ್ಲೆ ಹಾಗೂ ಹೈ.ಕ. ಭಾಗದ ತೀವ್ರ ಬಾಧಿತ ಇತರೆ ತಾಲೂಕುಗಳನ್ನು ವಾಸ್ತವಿಕ ಸಮೀಕ್ಷೆ ನಡೆಸಿ, ತಕ್ಷಣವೇ ‘ಬರಪೀಡಿತ’ ಎಂದು ಘೋಷಿಸಬೇಕು.
ಬೆಳೆ ಪರಿಹಾರ: ಮಳೆಯಿಲ್ಲದೆ ಬಿತ್ತನೆ ಮಾಡಲಾಗದ ಹಾಗೂ ಬಿತ್ತನೆ ಮಾಡಿ ಬೆಳೆ ನಷ್ಟ ಅನುಭವಿಸಿದ ಎಲ್ಲಾ ರೈತರಿಗೂ ಸೂಕ್ತ ಆರ್ಥಿಕ ನೆರವು/ಪರಿಹಾರ ಒದಗಿಸಬೇಕು.
ಮೂಲಭೂತ ಸೌಕರ್ಯ: ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ಗ್ರಾಮಗಳಿಗೆ ಪರ್ಯಾಯ ವ್ಯವಸ್ಥೆ ಹಾಗೂ ಜಾನುವಾರುಗಳಿಗೆ ಮೇವಿನ ಸಮರ್ಪಕ ವ್ಯವಸ್ಥೆ ಮಾಡಬೇಕು.
ವಿಮಾ ಯೋಜನೆಯಲ್ಲಿ ನ್ಯಾಯ: 2026-27ನೇ ಸಾಲಿನ ಮುಂಗಾರು ಹಂಗಾಮಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ (ಹೆಸರು, ಉದ್ದು, ಎಳ್ಳು, ಸೋಯಾಬೀನ್) ಕ್ರಾಪ್ ಕಟಿಂಗ್ ಸಮೀಕ್ಷೆಯಲ್ಲಿ ರೈತರಿಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಬೇಕು.
ನಿರ್ಲಕ್ಷಿಸಿದರೆ ಉಪವಾಸ ಸತ್ಯಾಗ್ರಹದ ಎಚ್ಚರಿಕೆ:
“ಹಲವು ದಶಕಗಳಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗಕ್ಕೆ ಈಗ ಪ್ರಕೃತಿಯೂ ಮೋಸ ಮಾಡಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರವೂ ರೈತರ ನೆರವಿಗೆ ಧಾವಿಸದಿದ್ದರೆ, ಅದು ಈ ಭಾಗಕ್ಕೆ ಮಾಡುವ ಬಹುದೊಡ್ಡ ದ್ರೋಹವಾಗಲಿದೆ. ಸರ್ಕಾರ ವಿಳಂಬ ಮಾಡದೆ ನ್ಯಾಯ ಒದಗಿಸಬೇಕು; ತಪ್ಪಿದಲ್ಲಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ನೇತೃತ್ವದಲ್ಲಿ ರೈತರೊಂದಿಗೆ ಸೇರಿ ಬೃಹತ್ ‘ಉಪವಾಸ ಸತ್ಯಾಗ್ರಹ’ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ” ಎಂದು ಸಮಿತಿ ಖಡಕ್ ಎಚ್ಚರಿಕೆ ನೀಡಿದೆ.
​ಮನವಿ ಸಲ್ಲಿಕೆ ವೇಳೆ ಸಮಿತಿಯ ಪ್ರಮುಖ ಮುಖಂಡರಾದ ಚಂದ್ರಶೇಖರ ಹರಸೂರ, ಉಮಾಕಾಂತ ನಿಗ್ಗುಡಗಿ, ಅರುಣಕುಮಾರ ಕೊಡಲಹಂಗರಗಾ, ಜಗದೀಶ ಪಾಟೀಲ ರಾಜಾಪೂರ, ಶಿವರಾಜ ಮಾಲೀಪಾಟೀಲ, ಮಲ್ಲಿನಾಥ ಪಾಟೀಲ ಕಾಳಗಿ, ಪಿತಂಬರಾವ ಘಂಟೆ, ಭವಾನಿರಾವ ಪತ್ತೇಪೂರ ಸೇರಿದಂತೆ ಹಲವು ಹೋರಾಟಗಾರರು ಉಪಸ್ಥಿತರಿದ್ದರು.

​- ವರದಿ: ಕನ್ನಡ ಸಾಮ್ರಾಟ್ ವಿಶೇಷ ಪ್ರತಿನಿಧಿ

 

 

Share This

Facebook
X
WhatsApp
0 0 votes
Article Rating
Subscribe
Notify of
guest
0 Comments
Oldest
Newest Most Voted

ಇತ್ತೀಚಿನ ಸುದ್ದಿಗಳು