Home » ಕಲಬುರಗಿ » ಚಿಂಚೋಳಿ » ವೀರಶೈವ-ಲಿಂಗಾಯತ ಒಂದೇ: ಸಮಾಜ ಒಡೆಯುವ ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗದಿರಿ – ಶ್ರೀಶೈಲ ಜಗದ್ಗುರುಗಳ ಖಡಕ್ ಎಚ್ಚರಿಕೆ

ವೀರಶೈವ-ಲಿಂಗಾಯತ ಒಂದೇ: ಸಮಾಜ ಒಡೆಯುವ ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗದಿರಿ – ಶ್ರೀಶೈಲ ಜಗದ್ಗುರುಗಳ ಖಡಕ್ ಎಚ್ಚರಿಕೆ

ಕನ್ನಡ ಸಾಮ್ರಾಟ್ – ವಿಶೇಷ ವರದಿ
ವೀರಶೈವ-ಲಿಂಗಾಯತ ಒಂದೇ: ಸಮಾಜ ಒಡೆಯುವ ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗದಿರಿ – ಶ್ರೀಶೈಲ ಜಗದ್ಗುರುಗಳ ಖಡಕ್ ಎಚ್ಚರಿಕೆ
​ವರದಿ: ವಿಶೇಷ ಪ್ರತಿನಿಧಿ, ಕನ್ನಡ ಸಾಮ್ರಾಟ್
ಸ್ಥಳ: ಚಿಂಚೋಳಿ
ಚಿಂಚೋಳಿ: “ವೀರಶೈವ ಮತ್ತು ಲಿಂಗಾಯತ ಎರಡೂ ಧರ್ಮಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕೇವಲ ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಇಬ್ಭಾಗ ಮಾಡಲು ಯತ್ನಿಸುತ್ತಿರುವ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಸುಳ್ಳು ಮಾತುಗಳಿಗೆ ಭಕ್ತರು ಎಂದಿಗೂ ಸೊಪ್ಪು ಹಾಕಬಾರದು,” ಎಂದು ಶ್ರೀಶೈಲ ಮಹಾಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಸಮಾಜಕ್ಕೆ ಕಳಕಳಿಯ ಕರೆ ನೀಡಿದ್ದಾರೆ.
​ಚಿಂಚೋಳಿ ತಾಲೂಕಿನ ಆಣವಾರ ಕ್ರಾಸಿನ ಶ್ರೀ ರೇವಣಸಿದ್ಧೇಶ್ವರ ಪಾದಕಟ್ಟಿ ದೇವಸ್ಥಾನದ ಆವರಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿದ್ದ ಆದಿ ಜಗದ್ಗುರು ರೇಣುಕಾಚಾರ್ಯ ಜಯಂತಿ, ಪಂಚಾಚಾರ್ಯರ ಯುಗಮಾನೋತ್ಸವ ಹಾಗೂ ಮಹಾತ್ಮ ಬಸವೇಶ್ವರ ಜಯಂತಿ ಮಹೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡುತ್ತಾ ಅವರು ಈ ಮೇಲಿನಂತೆ ನುಡಿದರು.
ವಚನಗಳ ಅಪಾರ್ಥ ಬೇಡ, ಭಕ್ತಿ ಇರಲಿ
​”ಇತ್ತೀಚಿನ ದಿನಗಳಲ್ಲಿ ಕೆಲವರು ವಚನಗಳನ್ನು ತಮಗೆ ಬೇಕಾದಂತೆ ಅಪಾರ್ಥ ಮಾಡಿಕೊಂಡು ಸಮಾಜದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ಬಸವಾದಿ ಶರಣರು ಹಾಗೂ ಪಂಚಾಚಾರ್ಯರು ಸಾರಿದ ಸಿದ್ಧಾಂತಗಳು ಹಾಗೂ ಪರಂಪರೆ ಒಂದೇ ಆಗಿದೆ. ಎಲ್ಲೆಲ್ಲಿ ಶ್ರದ್ಧೆ, ಭಕ್ತಿ ಇರುತ್ತದೆಯೋ ಅಲ್ಲಿ ಪವಾಡಗಳು ತಾನಾಗಿಯೇ ನಡೆಯುತ್ತವೆ. ಸಮಾಜವನ್ನು ಒಡೆಯುವವರ ಮಾತಿಗೆ ಕಿವಿಗೊಡದೆ, ಶರಣರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು,” ಎಂದು ಶ್ರೀಗಳು ಮಾರ್ಮಿಕವಾಗಿ ಕಿವಿಮಾತು ಹೇಳಿದರು.

ರೇಣುಕಾಚಾರ್ಯರು ಅಡಿಪಾಯ, ಬಸವಣ್ಣ ಭವ್ಯಸೌಧ

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ,

“ರೇಣುಕಾಚಾರ್ಯ ಮತ್ತು ಬಸವಣ್ಣ ಇಬ್ಬರೂ ವೀರಶೈವ ಲಿಂಗಾಯತ ಸಮಾಜದ ಎರಡು ಕಣ್ಣುಗಳಾಗಿದ್ದಾರೆ. ರೇಣುಕಾಚಾರ್ಯರು ಸಮಾಜಕ್ಕೆ ಭದ್ರ ಬುನಾದಿ ಹಾಕಿದರೆ, ಬಸವಣ್ಣನವರು ಆ ಅಡಿಪಾಯದ ಮೇಲೆ ಭವ್ಯ ಸೌಧವನ್ನು ನಿರ್ಮಿಸಿದರು,” ಎಂದು ಬಣ್ಣಿಸಿದರು.

ಸನಾತನ ಧರ್ಮಕ್ಕೆ ಚ್ಯುತಿ ಇಲ್ಲ
​ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ್ ಹಾಗೂ ಮಾಜಿ ಸಂಸದ ಡಾ. ಉಮೇಶ್ ಜಾಧವ್ ಅವರು ಮಾತನಾಡಿ, ಸನಾತನ ಧರ್ಮಕ್ಕೆ ಕೆಟ್ಟ ಹೆಸರು ತರಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಆದರೆ ಸೂರ್ಯ ಚಂದ್ರರಿರುವವರೆಗೂ ಸನಾತನ ಧರ್ಮ ಶಾಶ್ವತವಾಗಿರುತ್ತದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ ರೇಣುಕಾಚಾರ್ಯ ಜಯಂತಿಗೆ ಅಧಿಕೃತ ಚಾಲನೆ ದೊರೆತದ್ದು ಹೆಮ್ಮೆಯ ಸಂಗತಿ ಎಂದು ಸ್ಮರಿಸಿದರು.

ಸಾಧಕರಿಗೆ ಪ್ರಶಸ್ತಿಗಳ ಸುರಿಮಳೆ: ಆಚಾರ್ಯ ಸೇವಾ ರತ್ನ, ಕಾಯಕ ರತ್ನ ಪ್ರದಾನ

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಮಹನೀಯರನ್ನು ಗುರುತಿಸಿ ಕನ್ನಡ ಸಾಮ್ರಾಟ್ ಓದುಗರಿಗೆ ಹೆಮ್ಮೆಯಾಗುವಂತಹ ಈ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

‘ಆಚಾರ್ಯ ಸೇವಾ ರತ್ನ’ ಪ್ರಶಸ್ತಿ: ಕಳೆದ ವರ್ಷದ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಅಹರ್ನಿಶಿ ಶ್ರಮಿಸಿದ್ದ ಶಿವಬಸಯ್ಯ ಸ್ವಾಮಿ ಅವರಿಗೆ ಶ್ರೀಗಳು ಪ್ರತಿಷ್ಠಿತ ‘ಆಚಾರ್ಯ ಸೇವಾ ರತ್ನ’ ನೀಡಿ ವಿಶೇಷವಾಗಿ ಗೌರವಿಸಿದರು.

ಸಂಗೀತ ಸೇವಾ ರತ್ನ’ ಪ್ರಶಸ್ತಿ: ರಾಮಣಯ್ಯ ಸ್ವಾಮಿ ಇನೋಳಿ ಹಾಗೂ ರೇವಣಸಿದ್ದಯ್ಯ ಹಿರೇಮಠ ಅವರಿಗೆ ಪ್ರದಾನ ಮಾಡಲಾಯಿತು.

ಕಾಯಕ ರತ್ನ’ ಪುರಸ್ಕೃತರು: * ವೆಂಕಟರಾಮರೆಡ್ಡಿ ಪಾಟೀಲ (ಕೃಷಿ ಇಲಾಖೆ ನಿರ್ದೇಶಕರು)

ಗುರುಪಾದಯ್ಯಸ್ವಾಮಿ ಕೋಡ್ಲಿ (ಕರ್ನಾಟಕ ಗ್ರಾಮೀಣ ಬ್ಯಾಂಕ್ ಎಜಿಎಂ)

ರಾಜಶೇಖರ ನಿಪಾಣೆ (ಸಾಮಾಜಿಕ ಕಾರ್ಯಕರ್ತ)

ಡಾ. ಶಿವರಾಜ ಸಜ್ಜನಶೆಟ್ಟಿ (ಆರೋಗ್ಯ ಇಲಾಖೆ ಸಹ ನಿರ್ದೇಶಕ)

ಡಾ. ಬಸವೇಶ ಪಾಟೀಲ (ಕೇತಕಿ ಸಂಗಮೇಶ್ವರ ಆಸ್ಪತ್ರೆ ಮುಖ್ಯಸ್ಥ)

ಸಂತರ ಮತ್ತು ಗಣ್ಯರ ಅಪೂರ್ವ ಸಮಾಗಮ

ಕಾರ್ಯಕ್ರಮಕ್ಕೂ ಮುನ್ನ ಮಹಿಳೆಯರು ಕುಂಭಕಳಸ ಹೊತ್ತು ಮೆರವಣಿಗೆಯ ಮೂಲಕ ವಿವಿಧ ಮಠಾಧೀಶರನ್ನು ಸ್ವಾಗತಿಸಿದರು. ಭಾನುವಾರ ರಾತ್ರಿ ಭಕ್ತಿಗೀತೆಗಳ ಭಜನೆ, ಜಾಗರಣೆ ಹಾಗೂ ಸೋಮವಾರ ಬೆಳಗ್ಗೆ ವೇದಘೋಷಗಳೊಂದಿಗೆ ಸ್ವಾಮಿಗೆ ಮಹಾಭಿಷೇಕ ಜರುಗಿತು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಹಾಗೂ ಮಠಾಧೀಶರು:

 ಕೊಟ್ಟಳಿಯ ಮಹಾಂತೇಶ್ವರ ಮಠದ ತ್ರಿಮೂರ್ತಿ ಶಿವಾಚಾರ್ಯರು, ನಿಡಗುಂದಾದ ಕರುಣೇಶ್ವರ ಶಿವಾಚಾರ್ಯರು, ಚಂದನಕೇರಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಆಲೂರಿನ ಕಂಚಿ ವೃಷಭೇಂದ್ರ ಶಿವಾಚಾರ್ಯರು, ಇನಾಪುರದ ಉಪಮನ್ಯು ಶಿವಾಚಾರ್ಯರು, ಚಿತ್ತಾಪುರದ ವಿಜಯ ಮಹಾಂತೇಶ್ವರ ಶಿವಾಚಾರ್ಯರು, ನರನಳದ ಶಿವಕುಮಾರ ಶಿವಾಚಾರ್ಯರು ಸೇರಿದಂತೆ ಮಳಖೇಡ, ಸೇಡಂ, ಸುಲೇಪೇಟದ ಹಲವು ಪೂಜ್ಯರು ಉಪಸ್ಥಿತರಿದ್ದರು.

ರಾಜಕೀಯ ಹಾಗೂ ಸಮಾಜದ ಮುಖಂಡರು:

ಶಾರದಾದೇವಿ ಸುಭಾಷ್ ರಾಠೋಡ, ವಾಲ್ಮೀಕಿ ಭವನ ಉಪಾಧ್ಯಕ್ಷ ಅನಿಲ ಕುಮಾರ ಜಮಾದಾರ, ಬಾಬುರಾವ ಪಾಟೀಲ, ದೀಪಕನಾಗ ಪುಣ್ಯಶೆಟ್ಟಿ, ಬಿಜೆಪಿ ಅಧ್ಯಕ್ಷ ವಿಜಯಕುಮಾರ ಚೇಂಗಟ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಾಲಿ, ಲಕ್ಷ್ಮೀದೇವಿ ಮಂಜುನಾಥ ಕೊರವಿ, ರಾಜಶೇಖರ ನೀಲಂಗಿ. ಉಮಾ ಪಾಟೀಲ್, ಶರಣು ಪಾಟೀಲ್ ಮೋತಕಪಳ್ಳಿ, ಗೌತಮ್ ಬೊಮ್ಮನಹಳ್ಳಿ,  ಸುಭಾಷ್  ಸೀಳಿನ್, ರಾಜಶೇಖರ mustari, ನೀಲಕಂಠ ಸೀಳಿನ್, ಸಂತೋಷ್ ಗಡಂತಿ , ನರಸಮ್ಮ ಆವಂಟೀ ಹಾಗೂ ಮತ್ತಿತರ ಗಣ್ಯರ ಭಾಗಿ.

ರೇವಣಸಿದ್ಧೇಶ್ವರ ದೇವಸ್ಥಾನವನ್ನು ಒಂದು ಪ್ರಮುಖ ತೀರ್ಥಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವ ಸಂಕಲ್ಪ.

ಕಾರ್ಯಕ್ರಮವನ್ನು ಸಮಿತಿ ಅಧ್ಯಕ್ಷ ಸಂಗಯ್ಯ ಸ್ವಾಮಿ ಅಣವಾರ ಸ್ವಾಗತಿಸಿದರೆ, ಮಲ್ಲಿಕಾರ್ಜುನ ಉಡುಪಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿವರುದ್ರಯ್ಯ ಮಠಪತಿ ನಿರೂಪಿಸಿದರು.

​Photo credit: Jagannath Sherikar

Share This

Facebook
X
WhatsApp
0 0 votes
Article Rating
Subscribe
Notify of
guest
0 Comments
Oldest
Newest Most Voted

ಇತ್ತೀಚಿನ ಸುದ್ದಿಗಳು