Home » ಕಲಬುರಗಿ » ಚಿಂಚೋಳಿ » ಬುದ್ಧ,ಬಸವ,ಅಂಬೇಡ್ಕರ ಸಾಮಾಜಿಕ ಬದಲಾವಣೆಯ ತ್ರಿರತ್ನಗಳು; ಡಾ. ಕರಿಗೋಳೇಶ್ವರ

ಬುದ್ಧ,ಬಸವ,ಅಂಬೇಡ್ಕರ ಸಾಮಾಜಿಕ ಬದಲಾವಣೆಯ ತ್ರಿರತ್ನಗಳು; ಡಾ. ಕರಿಗೋಳೇಶ್ವರ

ಬುದ್ಧ,ಬಸವ,ಅಂಬೇಡ್ಕರ ಸಾಮಾಜಿಕ ಬದಲಾವಣೆಯ ತ್ರಿರತ್ನಗಳು; ಡಾ. ಕರಿಗೋಳೇಶ್ವರ

ಚಿಂಚೋಳಿ: ಸಮಾಜದಲ್ಲಿ ತುಂಬಿ ತುಳುಕುತ್ತಿದ್ದ ಜಾತಿ ವ್ಯವಸ್ಥೆ,ವರ್ಣ ವ್ಯವಸ್ಥೆ, ಸಾಮಾಜಿಕ ಅಸಮಾನತೆ ತೊಲಗಿಸಿ ಸಮ ಸಮಾಜ ನಿರ್ಮಿಸಲು ಬುದ್ಧ,ಬಸವ, ಅಂಬೇಡ್ಕರರು ವಹಿಸಿದ ಶ್ರಮ, ತ್ಯಾಗ,ಬಲಿದಾನ ಪ್ರತಿಯೊಂದು ನಿಮಿಷಕ್ಕೂ ನೆನೆಯಲ್ಪಡುವಂತದ್ದು, ಈ ಮೂರು ಜನ ಕೇವಲ ವ್ಯಕ್ತಿಗಳಲ್ಲ ಅವರು ಸಮಾಜದ ಶಕ್ತಿಗಳು ಅಂತೆಯೇ ಅವರನ್ನು ಸಾಮಾಜಿಕ ಬದಲಾವಣೆಯ ತ್ರಿರತ್ನಗಳೆಂದು ಗೌರವಿಸಲಾಗುತ್ತದೆ ಎಂದು ಸ.ಪ್ರ.ದ.ಕಾ. ಮಹಾಗಾಂವ ನ ಪ್ರಾಧ್ಯಾಪಕ ಡಾ.ಕರಿಗೋಳೇಶ್ವರ ಉಪನ್ಯಾಸ ನೀಡಿದರು.
ತಾಲ್ಲೂಕಿನ ವಾಣಿಜ್ಯ ಕೇಂದ್ರ ಹಾಗೂ ಹೋಬಳಿ ಘಟಕವಾದ ಸುಲೇಪೇಟ ಗ್ರಾಮದಲ್ಲಿ ಸಿದ್ಧಾರ್ಥ ಯುವಕ ಮಂಡಳಿ ಹಾಗೂ ನಮೋ ಬುದ್ದಾಯ ತರುಣ ಸಂಘದಿಂದ ಶುಕ್ರವಾರ ಗ್ರಾಮದ ತೇರು ಮೈದಾನದಲ್ಲಿ ಹಮ್ಮಿಕೊಂಡಿದ್ದ ಬುದ್ಧ,ಬಸವ,ಅಂಬೇಡ್ಕರ ರವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಇಂದು ನಾವು ಅಂಬೇಡ್ಕರರನ್ನು ಸರಿಯಾದ ರೀತಿಯಲ್ಲಿ ಅರ್ಥವೇ ಮಾಡಿಕೊಂಡಿಲ್ಲ. ಅಂಬೇಡ್ಕರ ವಿಚಾರಧಾರೆಗಳನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆಚರಣೆಗೆ ತಂದಾಗ ಮಾತ್ರ ಅಂಬೇಡ್ಕರ ಜಯಂತೋತ್ಸವಕ್ಕೆ ಹಾಗೂ ಆಚರಣೆಗೆ ಬೆಲೆ ಬರುತ್ತದೆ. ಮಹಾತ್ಮ ಗೌತಮ ಬುದ್ಧ ಹಾಗೂ ಮಹಾತ್ಮ ಬಸವಣ್ಣನವರ ಕನಸುಗಳು ಆಶೋತ್ತರಗಳೇ ಅಂಬೇಡ್ಕರರ ಲೇಖನಿಯಿಂದ ಮೂಡಿ ಬಂದವು. ಬುದ್ಧ, ಬಸವ ಅಂಬೇಡ್ಕರರು ಈ ಮೂವರು ಕೇವಲ ವ್ಯಕ್ತಿಗಳಲ್ಲ ಇವರು ಭಾರತದ ಭವಿಷ್ಯವನ್ನೇ ಬದಲಾಯಿಸಿದಂತಹ ಮೂರು ಶಕ್ತಿಗಳು. ಅಂಬೇಡ್ಕರ ಹೇಳಿದಂತೆ ಅವರ ಭಾವಚಿತ್ರವನ್ನು ತಲೆಯ ಮೇಲೆ ಹೊತ್ತುಕ್ಕೊಂಡು ಮೆರವಣಿಗೆ ಮಾಡುವುದಕ್ಕಿಂತ ಅವರ ವಿಚಾರಧಾರೆಗಳನ್ನು, ಕನಸುಗಳನ್ನು ಅವರು ಬಿತ್ತಿದ ಜ್ಞಾನವನ್ನು ತಲೆಯೊಳಗೆ ಇಟ್ಟುಕ್ಕೊಂಡು ಅವರ ಆಶಯದಂತೆ ನಡೆದುಕೊಂಡಾಗ ಮಾತ್ರ ಅವರು ಕಂಡ ಕನಸಿನ ಭಾರತ ನಿರ್ಮಾಣಗೊಳ್ಳುತ್ತದೆ ಅಲ್ಲದೇ ಅವರು ಜೀವನದುದ್ದಕ್ಕೂ ನಮಗಾಗಿ ಪಟ್ಟ ಅದೆಷ್ಟೋ ಅವಮಾನ ತ್ಯಾಗ ಬಲಿದಾನ ಶ್ರಮಗಳಿಗೆ ಗೌರವಕೊಟ್ಟಂತಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೇಡಂ ಮತಕ್ಷೇತ್ರದ ಮಾಜಿ ಶಾಸಕರಾದ ರಾಜಕುಮಾರ ಪಾಟೀಲ್ ತೆಲ್ಕೂರ್, ಇಂದು ರಾಜಕೀಯ ಲಾಭಕ್ಕೋಸ್ಕರ ಕೆಲವೊಂದು ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ವ್ಯಕ್ತಿಗಳು ಅಂಬೇಡ್ಕರ ರ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ ಇದು ದುರದೃಷ್ಟಕರ. ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಭಗವದ್ಗೀತೆ, ಕುರಾನ್, ಬೈಬಲ್ ಗಳಂತಹ ಧರ್ಮ ಗ್ರಂಥಗಳಿಗಿಂತ ಭಾರತದ ಸಂವಿಧಾನವೇ ಶ್ರೇಷ್ಠ ಗ್ರಂಥವಾಗಬೇಕು ಎಂದರು. ತದನಂತರದಲ್ಲಿ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿಕೊಂಡಿದ್ದ ಜಿಲ್ಲಾ ಪಂಚಾಯತನ ಮಾಜಿ ಅಧ್ಯಕ್ಷರಾದ ಭೀಮರಾವ ಟಿ.ಟಿ ಮಾತನಾಡಿ, ಈ ಸಮಾಜದಲ್ಲಿ ಶತಮಾನಗಳಿಂದ ಅನ್ಯಾಯಕ್ಕೋಳಗಾದ ಹೆಣ್ಣು ಮಕ್ಕಳಿಗಾಗಿ,ದಿನ- ದಲಿತರಿಗಾಗಿ ಡಾ. ಬಿ. ಆರ್. ಅಂಬೇಡ್ಕರರವರು ತನ್ನ ಮಂತ್ರಿ ಪದವಿಯನ್ನು ತ್ಯಾಗ ಮಾಡಿದರು. ಅವರ ತ್ಯಾಗ ಮತ್ತು ಶ್ರಮವನ್ನು ಪ್ರತಿದಿನ ಪ್ರತಿಕ್ಷಣ ಗೌರವಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಬೆಳಮಗಿ ಬುದ್ಧ ವಿಹಾರದ ಪೂಜ್ಯ ಭಂತೆ ಅಮರ ಜ್ಯೋತಿ ಬುದ್ಧನ ಪಂಚ ಶೀಲ ತತ್ವಗಳನ್ನು ಪಠಿಸಿದರು. ಕಾರ್ಯಕ್ರಮವನ್ನು ಅದ್ದೂರಿಯಾಗಷ್ಟೇ ಅಲ್ಲದೇ ಬಹು ಅರ್ಥಪೂರ್ಣವಾಗಿ ಜರುಗಿತು. ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರರವರ ಹಾಗೂ ಬುದ್ಧ, ಬಸವಣ್ಣನವರ ಭಾವಚಿತ್ರಗಳನ್ನು ವಿವಿಧ ವಾದ್ಯ ಮೇಳಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಬಣ್ಣ ಗುಲಗಂಜಿ ವಹಿಸಿದ್ದು, ಮಾಣಿಕರಾವ ಆರ್ ಗುಲಗುಂಜಿ,ರುದ್ರಶೆಟ್ಟಿ ಪಡಶೆಟ್ಟಿ, ಮುರಗೇಪ್ಪ ಕುಕಡಿ, ಮಹಾರುದ್ರಪ್ಪ ದೇಸಾಯಿ, ತಾಹೇರ ಪಟೇಲ್, ಶಾಮರಾವ ಮಾದೇಶಿ,ದೇವಿಂದ್ರಪ್ಪ ಹೊಳ್ಕರ, ಶರಣಪ್ಪ ಎಂ ಗುಲಗುಂಜಿ, ರುದ್ರಮುನಿ ಬುಗಡಿಕರ, ಮಾರುತಿ ಬಿ ಗಂಜಗಿರಿ, ಗೌತಮ ಬೊಮ್ಮನಹಳ್ಳಿ ಸೇರಿದಂತೆ ಇನ್ನಿತರ ಅತಿಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ರುದ್ರಮುನಿ ರಾಮತೀರ್ಥಕರ್ ಹಾಗೂ ಮಲ್ಲಿಕಾರ್ಜುನ ಗುಲಗುಂಜಿ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಸರ್ವ ಸದಸ್ಯರು ಸೇರಿ ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮಕ್ಕೆ ಪಿ.ಎಸ್.ಐ ಅಮರ ಕುಲಕರ್ಣಿ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ನ್ನು ನೀಡಲಾಗಿತ್ತು.

 

Share This

Facebook
X
WhatsApp
0 0 votes
Article Rating
Subscribe
Notify of
guest
0 Comments
Oldest
Newest Most Voted

ಇತ್ತೀಚಿನ ಸುದ್ದಿಗಳು