Home » ಕಲಬುರಗಿ » ಚಿಂಚೋಳಿ » ಖಾಯಂ ಇಒ ನೇಮಕಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ | ಕೆಳಹಂತದ ಅಧಿಕಾರಿಗಳ ಕೈಯಲ್ಲಿ ತಾಲೂಕಿನ ಅಭಿವೃದ್ಧಿ ಕಡೆಗಣನೆ

ಖಾಯಂ ಇಒ ನೇಮಕಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ | ಕೆಳಹಂತದ ಅಧಿಕಾರಿಗಳ ಕೈಯಲ್ಲಿ ತಾಲೂಕಿನ ಅಭಿವೃದ್ಧಿ ಕಡೆಗಣನೆ

ಖಾಯಂ ಇಒ ನೇಮಕಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ | ಕೆಳಹಂತದ ಅಧಿಕಾರಿಗಳ ಕೈಯಲ್ಲಿ ತಾಲೂಕಿನ ಅಭಿವೃದ್ಧಿ ಕಡೆಗಣನೆ

​ಕನ್ನಡ ಸಾಮ್ರಾಟ್ ವಿಶೇಷ ವರದಿ
ಚಿಂಚೋಳಿ (ಕಲಬುರ್ಗಿ):
ಕಲಬುರ್ಗಿ ಜಿಲ್ಲೆಯ ಅತಿದೊಡ್ಡ ಹಾಗೂ ಭೌಗೋಳಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶವಾಗಿರುವ ಚಿಂಚೋಳಿ ತಾಲೂಕಿನ ಅಭಿವೃದ್ಧಿ ಕುಂಠಿತಗೊಳ್ಳಲು ಕಾರಣವೇನು ಗೊತ್ತೇ?

ಈ ಪ್ರಶ್ನೆಗೆ ನೇರ ಉತ್ತರ- ‘ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಮತ್ತು ಪ್ರಭಾರಿಗಳ ದರ್ಬಾರು!’ ಹೌದು, ತಾಲೂಕಿನ ಗ್ರಾಮೀಣಾಭಿವೃದ್ಧಿಯ ಚುಕ್ಕಾಣಿ ಹಿಡಿಯಬೇಕಾದ ಅತಿ ಪ್ರಮುಖ ಹುದ್ದೆಯಾದ ‘ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (EO)’ ಸ್ಥಾನಕ್ಕೆ ಕಳೆದ 15 ವರ್ಷಗಳಿಂದ ಒಬ್ಬ ಕಾಯಂ ಅಧಿಕಾರಿಯನ್ನು ನೇಮಿಸಲು ಸರ್ಕಾರಗಳಿಗೆ ಸಾಧ್ಯವಾಗಿಲ್ಲ ಎಂಬುದು ವ್ಯವಸ್ಥೆಯ ಅಣಕವಾಗಿದೆ.
ಅರ್ಹರಿಲ್ಲ, ಅನರ್ಹರದ್ದೇ ಕಾರುಬಾರು!
​ತಾಲೂಕು ಪಂಚಾಯತ್ ಇಒ ಹುದ್ದೆ ಎಂದರೆ ಅದು ಜಿಲ್ಲಾ ಉಪ ವಿಭಾಗದ ಎಸಿ ಹುದ್ದೆಗೆ ಸಮಾನವಾದ ಬಹುದೊಡ್ಡ ಜವಾಬ್ದಾರಿ. ಆದರೆ, ಚಿಂಚೋಳಿಯಲ್ಲಿ ಕಳೆದ ಒಂದೂವರೆ ದಶಕದಿಂದ ನಡೆಯುತ್ತಿರುವುದೇ ಬೇರೆ. ಕೃಷಿ ಇಲಾಖೆಯ ನಿರ್ದೇಶಕರು, ಸಾಂಖ್ಯಿಕ ಇಲಾಖೆಯ ಅಧಿಕಾರಿಗಳು ಹೀಗೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಪಡದ ಅಧಿಕಾರಿಗಳು ಇಲ್ಲಿ ವರ್ಷಗಟ್ಟಲೆ ಪ್ರಭಾರಿಯಾಗಿದ್ದಾರೆ. ಪ್ರಸ್ತುತ ಕಮಲಾಪುರದ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕರಿಗೆ ಸ್ವಂತ ವೇತನದ ಮೇಲೆ ಇಲ್ಲಿನ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.
​ಅನಿವಾರ್ಯ ಕಾರಣಗಳಿಗೆ ಕೆಲವು ದಿನ ಪ್ರಭಾರಿ ವಹಿಸುವುದು ಸಹಜ. ಆದರೆ, 15 ವರ್ಷಗಳ ಸುದೀರ್ಘ ಕಾಲ ಕೆಳಹಂತದ ಅಧಿಕಾರಿಗಳಿಗೆ ಈ ಉನ್ನತ ಹುದ್ದೆಯ ಜವಾಬ್ದಾರಿ ನೀಡಿ, ತಾಲೂಕಿನ ಬಡವರ ಹಾಗೂ ರೈತರ ಅಭಿವೃದ್ಧಿಯ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂಬುದು ಸ್ಥಳೀಯರ ಆಕ್ರೋಶ.

ಮುಖ್ಯ ಕಾರ್ಯದರ್ಶಿಗೆ ಮನವಿ: ಕಾಂಗ್ರೆಸ್ ಮುಖಂಡರ ಆಗ್ರಹ
​ಈ ಆಡಳಿತಾತ್ಮಕ ಅನ್ಯಾಯದ ವಿರುದ್ಧ ಇದೀಗ ಧ್ವನಿ ಎತ್ತಿರುವ ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವಕ್ತಾರರಾದ ಶರಣು ಪಾಟೀಲ ಮೋತಕಪಳ್ಳಿ ಅವರು, ಖಾಯಂ ಅಧಿಕಾರಿ ನೇಮಕಕ್ಕೆ ಆಗ್ರಹಿಸಿ ತಹಸೀಲ್ದಾರ್ ಮುಖಾಂತರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
​”ಕೂಡಲೇ ಈ ಪ್ರಭಾರಿಗಳ ಹಾವಳಿಯಿಂದ ಚಿಂಚೋಳಿ ತಾಲೂಕು ಪಂಚಾಯತಿಗೆ ವಿಮುಕ್ತಿ ನೀಡಬೇಕು. ಗ್ರಾಮೀಣಾಭಿವೃದ್ಧಿ ಇಲಾಖೆಯ ಅರ್ಹ ಹಾಗೂ ಖಾಯಂ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು. ಹಿಂದುಳಿದ ನಮ್ಮ ತಾಲೂಕಿನ ಹಾಗೂ ಗ್ರಾಮೀಣ ಭಾಗದ ಅಭಿವೃದ್ಧಿಯನ್ನು ರಾಜಕಾರಣಿಗಳು ಮತ್ತು ಉನ್ನತ ಅಧಿಕಾರಿಗಳು ಕೇವಲ ಬಾಯಿಮಾತಿಗೆ ಸೀಮಿತ ಮಾಡದೇ ಕಾರ್ಯರೂಪಕ್ಕೆ ತರಬೇಕು” ಎಂದು ಶರಣು ಪಾಟೀಲ ಮೋತಕಪಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ಕಟ್ಟುನಿಟ್ಟಾಗಿ ಒತ್ತಾಯಿಸಿದ್ದಾರೆ.
ಕನ್ನಡ ಸಾಮ್ರಾಟ್ ವಿಶ್ಲೇಷಣೆ:
ಒಟ್ಟಿನಲ್ಲಿ, ಚಿಂಚೋಳಿಯ ಮುಗ್ಧ ಜನತೆ ನೈಜ ಅಭಿವೃದ್ಧಿಯ ನಿರೀಕ್ಷೆಯಲ್ಲಿದ್ದಾರೆ. ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪಲು ದಕ್ಷ ಅಧಿಕಾರಿಯ ಅಗತ್ಯವಿದೆ. ಇನ್ನಾದರೂ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಎಚ್ಚೆತ್ತು, 15 ವರ್ಷಗಳ ಈ ‘ಪ್ರಭಾರಿ ಶಾಪ’ದಿಂದ ಚಿಂಚೋಳಿಗೆ ವಿಮೋಚನೆ ನೀಡಿ, ಓರ್ವ ಕಾಯಂ ಇಒ ಅವರನ್ನು ನೇಮಿಸುತ್ತದೆಯೇ ಕಾದು ನೋಡಬೇಕಿದೆ.

Share This

Facebook
X
WhatsApp
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments

ಇತ್ತೀಚಿನ ಸುದ್ದಿಗಳು