ಐಪಿಎಲ್ ಇತಿಹಾಸದಲ್ಲೇ ಮಹಾ ಡೀಲ್: ಬರೋಬ್ಬರಿ 16,600 ಕೋಟಿ ರೂ.ಗೆ ಬಿಕರಿಯಾದ ಆರ್‌ಸಿಬಿ! ಹೊಸ ಮಾಲೀಕರು ಯಾರು?
ಬೆಂಗಳೂರು: ಐಪಿಎಲ್ 2026ರ (IPL 2026) ಹಬ್ಬ ಶುರುವಾಗಲು ಕೇವಲ ಕೆಲವೇ ದಿನಗಳು ಬಾಕಿ ಇರುವಾಗಲೇ ಕ್ರೀಡಾ ಜಗತ್ತಿನಲ್ಲಿ ಸಂಚಲನ ಮೂಡಿಸುವ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ನಮ್ಮ ಹೆಮ್ಮೆಯ, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಬೃಹತ್ ಮೊತ್ತಕ್ಕೆ ಮಾರಾಟವಾಗಿದೆ. ಕೇವಲ ಆಟಗಾರರ ಹರಾಜಿನ ಬಗ್ಗೆ ಮಾತನಾಡುತ್ತಿದ್ದ ಅಭಿಮಾನಿಗಳಿಗೆ, ಇಡೀ ಫ್ರಾಂಚೈಸಿಯೇ ಸೇಲ್ ಆಗಿರುವ ಬ್ರೇಕಿಂಗ್ ನ್ಯೂಸ್ ಅಚ್ಚರಿ ಮೂಡಿಸಿದೆ.
ದಾಖಲೆಯ ಮೊತ್ತಕ್ಕೆ ಸೇಲ್ ಆದ ಬೆಂಗಳೂರು ತಂಡ!
ಆರ್‌ಸಿಬಿ ಫ್ರಾಂಚೈಸಿಯನ್ನು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL – ಡಿಯಾಜಿಯೊ) ನಿಂದ ಬರೋಬ್ಬರಿ 1.78 ಬಿಲಿಯನ್ ಡಾಲರ್ (ಅಂದಾಜು 16,600 ಕೋಟಿ ರೂ.) ನೀಡಿ ಬೃಹತ್ ಒಕ್ಕೂಟವೊಂದು ಖರೀದಿಸಿದೆ. ಈ ಒಕ್ಕೂಟದಲ್ಲಿ ಭಾರತದ ಪ್ರತಿಷ್ಠಿತ ಆದಿತ್ಯ ಬಿರ್ಲಾ ಗ್ರೂಪ್ (Aditya Birla Group), ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಅಮೆರಿಕದ ಕ್ರೀಡಾ ಹೂಡಿಕೆದಾರ ಡೇವಿಡ್ ಬ್ಲಿಟ್ಜರ್ ಅವರ ಬೋಲ್ಟ್ ವೆಂಚರ್ಸ್ ಹಾಗೂ ಬ್ಲಾಕ್‌ಸ್ಟೋನ್ ಸಂಸ್ಥೆಗಳು ಪಾಲುದಾರರಾಗಿವೆ. ಇದು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಫ್ರಾಂಚೈಸಿ ಡೀಲ್ ಆಗಿ ದಾಖಲೆ ಬರೆದಿದೆ.
ಆರ್‌ಸಿಬಿಯ ಹೊಸ ಸಾರಥಿಗಳು ಯಾರು?
ಹೊಸ ಮಾಲೀಕತ್ವದ ಅಡಿಯಲ್ಲಿ ಆರ್‌ಸಿಬಿ ಆಡಳಿತ ಮಂಡಳಿಯೂ ಬದಲಾಗಲಿದೆ. ಆದಿತ್ಯ ಬಿರ್ಲಾ ಗ್ರೂಪ್‌ನ ನಿರ್ದೇಶಕ ಹಾಗೂ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಆರ್ಯಮಾನ್ ವಿಕ್ರಮ್ ಬಿರ್ಲಾ (Aryaman Vikram Birla) ಅವರು ತಂಡದ ನೂತನ ಚೇರ್ಮನ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇನ್ನು ಟೈಮ್ಸ್ ಗ್ರೂಪ್‌ನ ಸತ್ಯನ್ ಗಜ್ವಾನಿ ವೈಸ್-ಚೇರ್ಮನ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಹಾಲಿ ಚಾಂಪಿಯನ್ಸ್‌ಗೆ ಹೊಸ ಕಳೆ
ಕಳೆದ 2025ರ ಸೀಸನ್‌ನಲ್ಲಿ ಟ್ರೋಫಿ ಗೆದ್ದು 18 ವರ್ಷಗಳ ಕಪ್ ಬರವನ್ನು ನೀಗಿಸಿದ್ದ ಆರ್‌ಸಿಬಿ, ಈಗ ಹೊಸ ಮಾಲೀಕರ ಕೈಗೆ ಸೇರಿದೆ. ಕಪ್ ಗೆದ್ದ ಮರು ವರ್ಷವೇ ಫ್ರಾಂಚೈಸಿ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದು ತಂಡದ ಬ್ರಾಂಡ್ ಮೌಲ್ಯ ಮತ್ತು ಜಾಗತಿಕ ಮಟ್ಟದಲ್ಲಿರುವ ಅಭಿಮಾನಿಗಳ ಬಳಗ ಎಷ್ಟರಮಟ್ಟಿಗೆ ದೊಡ್ಡದು ಎಂಬುದನ್ನು ಸಾಬೀತುಪಡಿಸಿದೆ.
ರಾಜಸ್ಥಾನ್ ರಾಯಲ್ಸ್ ಕೂಡ ಮಾರಾಟ!
ಇದೇ ವೇಳೆ ಕೇವಲ ಆರ್‌ಸಿಬಿ ಮಾತ್ರವಲ್ಲದೆ, ಚೊಚ್ಚಲ ಐಪಿಎಲ್ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ (RR) ಫ್ರಾಂಚೈಸಿ ಕೂಡ ಮಾರಾಟವಾಗಿದೆ. ಅಮೆರಿಕ ಮೂಲದ ಉದ್ಯಮಿ ಕಾಲ್ ಸೋಮಾನಿ (Kal Somani) ನೇತೃತ್ವದ ಒಕ್ಕೂಟವು 1.63 ಬಿಲಿಯನ್ ಡಾಲರ್ (ಅಂದಾಜು 15,290 ಕೋಟಿ ರೂ.) ನೀಡಿ ರಾಜಸ್ಥಾನ್ ತಂಡವನ್ನು ತನ್ನದಾಗಿಸಿಕೊಂಡಿದೆ.
ಒಟ್ಟಿನಲ್ಲಿ, ಈ ಬಾರಿಯ ಐಪಿಎಲ್ ಕೇವಲ ಮೈದಾನದೊಳಗಿನ ಆಟಕ್ಕಷ್ಟೇ ಸೀಮಿತವಾಗಿಲ್ಲ, ಮೈದಾನದ ಹೊರಗಿನ ಸಾವಿರಾರು ಕೋಟಿಗಳ ವ್ಯವಹಾರವೂ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನಮ್ಮ ಬೆಂಗಳೂರು ತಂಡಕ್ಕೆ ಹೊಸ ಮಾಲೀಕರು ಎಷ್ಟರಮಟ್ಟಿಗೆ ಅದೃಷ್ಟ ತರಲಿದ್ದಾರೆ ಕಾದು ನೋಡಬೇಕಿದೆ!






