ಕಲಬುರಗಿ,ಡಿ.29: ಕನ್ನಡ ಸಾಹಿತ್ಯ ಲೋಕಕ್ಕೆ ಅವಿಸ್ಮರಣೀಯ ಕೊಡುಗೆಯನ್ನು ನೀಡುವುದರ ಮುಖಾಂತರ ಈ ನಾಡಿನ ನೆಲ.ಜಲ,ಭಾಷೆ ಮತ್ತು ಸಾಹಿತ್ಯ ಲೋಕಕ್ಕೆ ಕುವೆಂಪು ಅವರು ಕೊಟ್ಟ ಕೊಡುಗೆಗಳನ್ನು ಸ್ಮರಿಸಲು ರಾಷ್ಟ್ರಕವಿ ಕುವೆಂಪು ಅವರು ಜನ್ಮ ದಿನವನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸುವ ಮುಖಾಂತರ ಸಮಾಜದಲ್ಲಿ ಮುಂದಿನ ಪೀಳಿಗೆಗೆ ಕುವೆಂಪುರವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು ಹೇಳಿದರು.

ಸೋಮವಾರದಂದು ಕಲಬುರಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಇವುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಪ್ರಯುಕ್ತ ವಿಶ್ವಮಾನವ ದಿನಾಚರಣೆ-2025 ಕಲಬುರಗಿಯ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಅವರು ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಫಾರ್ಚನೆ ಮಾಡಿ ಮಾತನಾಡಿದರು.
ಸಮಾಜದಲ್ಲಿ ಪ್ರತಿಯೊಂದು ಮಗು ವಿಶ್ವ ಮಾನವನಾಗಿ ಜನಿಸುತ್ತದೆ.ಅದನ್ನು ಉತ್ತಮ ನಾಗರಿಕಗನ್ನಾಗಿ ರೂಪಿಸುವ ಜವಬ್ದಾರಿ ಎಲ್ಲಾ ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಹೇಳಿದರು. ಕರ್ನಾಟಕ ಘನ ಸರ್ಕಾರವು ಕುವೆಂಪು ಅವರ ಸಮಾಧಿ ಸ್ಥಳವನ್ನು ಸ್ಮಾರಕವಾಗಿ ಮಾಡುವ ಮೂಲಕ ಹೆಚ್ಚಿನ ಪ್ರವಾಸಿಗರು ಭೇಟಿಯನ್ನು ನೀಡುವ ತಾಣವಾಗಿದೆ ಎಂದರು .
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ನಾಸಿಯವರು ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು.
ಕಲಬುರಗಿ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಪ್ರೊ ಡೊಣ್ಣೇಗೌಡರ ವೆಂಕಣ್ಣ ಅವರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ನೀಡಿ ಮಾತನಾಡಿ, ಬದುಕಿನ ಪ್ರತಿಯೊಂದು ಕ್ಷೇತ್ರದಲ್ಲಿ ಇಂದಿನ ದಿನಮಾನಗಳಲ್ಲಿ ಮಾನವೀಯತೆ ಎಂಬುದು ಮರೆಯಾಗುತ್ತಿದೆ. ಕೋಮು ಗಲಭೆ, ಗುಂಡಿನದಾಳಿ ,ಚೂರಿ ಇರಿತ,ಮರ್ಯಾದಾ ಹತ್ಯೆ,ಧಾರ್ಮಿಕ ಗಲಭೆ ಎಂಬುದು ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗುತ್ತಿದ್ದು. ಇಂತಹ ಪರಸ್ಥಿತಿಯಿಂದ ಹೊರಬರಲು ಪ್ರತಿಯೊಬ್ಬರು ವಿಶ್ವ ಮಾನವನಾಗಬೇಕು.
ಇಂದಿನ ದಿನಮಾನಗಳಲ್ಲಿ ಮಹಾನ್ ಸಾಧಕರ ಮೂರ್ತಿಯನ್ನು ಸ್ಥಾಪಿಸಿ ಅವುಗಳಿಗೆ ಮಾಲಾರ್ಪಣೆಯನ್ನು ಮಾಡುವುದಷ್ಟೇ ಕಾರ್ಯವನ್ನಾಗಿಸಿಕೊಳ್ಳದೆ ಅವರ ಸಾಧನೆ ಮತ್ತು ತತ್ವ ಸಂದೇಶಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು.ಜನರಲ್ಲಿ ತತ್ವಪೂರ್ಣ ಜ್ಞಾನವನ್ನು ಬೆಳಸಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯವಿದೆ ಎಂದು ಹೇಳಿದರು.
ಸಾಹಿತಿಗಳಾದ ಡಾ. ಚಿ.ಸಿ ನಿಂಗಣ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯ ಮೂಲಕ ವೈಚಾರಿಕ ಹಿನ್ನೆಲೆಯಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಮಹಾನ್ ವ್ಯಕ್ತಿ ರಾಷ್ಟ್ರಕವಿ ಕುವೆಂಪು ಅವರ ಸಾಧನೆಗಳು ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಬೇಕು ಪ್ರತಿಯೊಬ್ಬ ಕನ್ನಡಿಗರು ಮಾತೃ ಭಾಷೆಗೆ ಹೆಚ್ಚಿನ ಮಹತ್ವ ನೀಡುವುದರ ಮುಖಾಂತರ ಕನ್ನಡ ಭಾಷೆಯನ್ನು ಉಳಿಸಿ ಬೆಳಸಬೇಕು ಎಂದು ಹೇಳಿದರು.
ಪದವಿ ಪೂರ್ವ ಪದವಿ ಮಹಾವಿದ್ಯಾಲಯವು ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಎಂ.ಪಿ.ಎಚ್.ಎಸ್. ಸೂಪರ ಮಾರ್ಕೆಟ್ ) ಮಹಾಲಕ್ಷ್ಮೀ, ಅಶೋಕ, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಶಿವಾನಿ ಮಲ್ಲಿಕಾರ್ಜುನ, ಪದವಿ ಮಹಾವಿದ್ಯಾಲಯ ರೇವಣ್ಣಸಿದ್ದಪ್ಪ ಕಾಂತಾ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಚಿತ್ತಾಪೂರ ಕಾರ್ತಿಕ ತಂದೆ ಭೀಮಪ್ಪ ಒಟ್ಟು ವಿಜೇತರಾದ 30 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪುಸ್ತಕಗಳನ್ನು ನೀಡಿ ಸನ್ಮಾನಿಸಲಾಯಿತು.
ಕವಿತಾ ಮಠಪತಿ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ವರ್ಷಾ ರಾಜೀವ ಜಾನೆ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿಜಯಕುಮಾರ ತೆಗಲತಿಪ್ಪಿ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಸದಸ್ಯರಾದ ಸುರೇಶ ಬಡಿಗೇರ, ಮಲ್ಲಿಕಾರ್ಜುನ ಖರ್ಗೆ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಬಿ.ಎಸ್. ಮಾಲಿಪಾಟೀಲ, ನಿವೃತ್ತ ಮುಖ್ಯ ಶಿಕ್ಷಕರಾದ ವೆಂಕಟೇಶ ನೀರಡಗಿ, ಸಂಗೀತ ಕಲಾವಿದ ಗಿರಿಜಾ ಕರ್ಪೂರ್, ಪ.ಮಾನುಸಾಗರ, ಮಲ್ಲಪ್ಪ, ಮಣಿಗಾರ ಅನಿಲ ಸೇರಿದಂತೆ ಪದವಿಪೂರ್ವಕಾಲೇಜಿನ ಪ್ರಾಂಶುಪಾಲರು, ಸಾಹಿತಿಗಳು ವಿದ್ಯಾರ್ಥಿಗಳು ಭಾಗವಹಿಸಿದ್ದರು.




