ಚಿಂಚೋಳಿಯಲ್ಲಿ ಭುಗಿಲೆದ್ದ ಆಕ್ರೋಶ: ಒಳಮೀಸಲಾತಿ ರೋಸ್ಟರ್ ಗೊಂದಲ ಸರಿಪಡಿಸಲು ಬಲಗೈ ಸಮಾಜದ ಬೃಹತ್ ಪ್ರತಿಭಟನೆ
ಕನ್ನಡ ಸಾಮ್ರಾಟ್ ವಿಶೇಷ ವರದಿ, ಕಲಬುರ್ಗಿ (ಚಿಂಚೋಳಿ) :
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿ ವಿಚಾರವಾಗಿ ದಿನಕ್ಕೊಂದು ಗೊಂದಲಗಳು ಸೃಷ್ಟಿಯಾಗುತ್ತಿದ್ದು, ಇದೀಗ ಚಿಂಚೋಳಿಯಲ್ಲಿ ಮೀಸಲಾತಿ ರೋಸ್ಟರ್ (Roster System) ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಎಸ್‌ಸಿ ಬಲಗೈ ಸಮಾಜದ ವತಿಯಿಂದ ತಹಸೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಒಳಮೀಸಲಾತಿ ರೋಸ್ಟರ್ ಕೋಷ್ಟಕದಲ್ಲಿ ಪ್ರವರ್ಗ ‘ಬಿ’ ಮತ್ತು ‘ಸಿ’ (Category B & C) ಯನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದಲೇ ಸಂಪೂರ್ಣವಾಗಿ ಹೊರಗಿಟ್ಟಂತೆ ಭಾಸವಾಗುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಈ ತಾರತಮ್ಯವನ್ನು ಸರಿಪಡಿಸಬೇಕು ಹಾಗೂ ಈ ಪ್ರವರ್ಗಗಳಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟಗಾರರ ಪ್ರಮುಖ ಆಗ್ರಹಗಳು ಹಾಗೂ ಎಚ್ಚರಿಕೆ:
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಮಾಜದ ವಿವಿಧ ಮುಖಂಡರು ಸರ್ಕಾರದ ನಡೆಯ ವಿರುದ್ಧ ಗುಡುಗಿದರು:
- ಗೌತಮ್ ಬೊಮ್ನಳ್ಳಿ (ಸಮಾಜದ ಮುಖಂಡ): “ಒಳಮೀಸಲಾತಿ ಜಾರಿಯಲ್ಲಿ ಆಗಿರುವ ಎಡವಟ್ಟನ್ನು ಸರ್ಕಾರ ತಕ್ಷಣವೇ ಬಗೆಹರಿಸಬೇಕು. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆಯಾಗಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಕಲ್ಪನೆಯಡಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ.”
- ಮಾರುತಿ ಗಂಜಗೇರಿ (ಸಾಮಾಜಿಕ ಹೋರಾಟಗಾರ): “ಎ, ಬಿ, ಮತ್ತು ಸಿ ಪ್ರವರ್ಗಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಒಳಮೀಸಲಾತಿ ನೀಡುವ ವರದಿಯಲ್ಲಿರುವ ನ್ಯೂನತೆಗಳು ಬಗೆಹರಿಯುವವರೆಗೂ, ಪ್ರಸ್ತುತ ನಡೆಯುತ್ತಿರುವ ಎಲ್ಲಾ ಮೀಸಲಾತಿ ಪ್ರಕ್ರಿಯೆಗಳನ್ನು ತಕ್ಷಣವೇ ತಡೆಹಿಡಿಯಬೇಕು.”
- ಆನಂದ್ ಟೈಗರ್ (ಪುರಸಭೆ ಮಾಜಿ ಅಧ್ಯಕ್ಷ): “ಮೀಸಲಾತಿ ಗೊಂದಲಗಳು ಪರಿಹಾರವಾಗುವವರೆಗೆ ಸರ್ಕಾರ ಹೊಸ ಜಾತಿ ಪ್ರಮಾಣಪತ್ರ (Caste Certificate) ವಿತರಿಸುವುದನ್ನು ತುರ್ತಾಗಿ ನಿಲ್ಲಿಸಬೇಕು. ಅಲ್ಲಿಯವರೆಗೆ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಾಂಕ್ಷಿಗಳಿಗೆ ಹಳೆಯ ಜಾತಿ ಪ್ರಮಾಣಪತ್ರಗಳನ್ನೇ ಮುಂದುವರಿಸಲು ಅವಕಾಶ ನೀಡಬೇಕು.”
- ಅಮರ ಲೋಡ್ಡನೂರ್ (ಯುವ ಮುಖಂಡ): “ಮೂರಕ್ಕೂ (ಎ, ಬಿ, ಸಿ) ಪ್ರವರ್ಗಗಳಿಗೆ ಸಮಾನ ಅವಕಾಶ ಸಿಗುವಂತೆ ಕಾಯ್ದೆಯನ್ನು ರೂಪಿಸುವುದು ಸರ್ಕಾರದ ಜವಾಬ್ದಾರಿ. ಒಳಮೀಸಲಾತಿಗೆ ಅನ್ವಯಿಸುವ ರೋಸ್ಟರ್ ಬಿಂದುವನ್ನು ಕಡ್ಡಾಯವಾಗಿ ಸರಿಪಡಿಸಲೇಬೇಕು.”
ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪರಿಶಿಷ್ಟ ಜಾತಿ ಬಲಗೈ ಸಮಾಜದ ಸಂಚಾಲಕರಾದ ರೇವಣಸಿದ್ಧಪ್ಪ ಸುಬೆದಾರ್ ಅವರು ತಮ್ಮ ಹಕ್ಕೊತ್ತಾಯಗಳ ಮನವಿ ಪತ್ರವನ್ನು ಓದುವುದರ ಮೂಲಕ ತಹಸೀಲ್ದಾರ್ ಕಚೇರಿಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ಉಪ ತಹಸೀಲ್ದಾರ್ ವೆಂಕಟೇಶ್ ದುಗ್ಗನ ಅವರು ಮಾತನಾಡಿ, “ನಿಮ್ಮ ಬೇಡಿಕೆಗಳನ್ನು ಒಳಗೊಂಡ ಈ ಮನವಿ ಪತ್ರವನ್ನು ತಕ್ಷಣವೇ ರಾಜ್ಯ ಸರ್ಕಾರದ ಹಾಗೂ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ರವಾನಿಸಲಾಗುವುದು” ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪ್ರಮುಖರು
ಈ ಹೋರಾಟದಲ್ಲಿ ಸಮಾಜದ ಪ್ರಮುಖರಾದ ಪಾಂಡುರಂಗ ಲೋಡ್ದನೊರ್, ಓಮನರಾವ್ ಕೊರವಿ, ಚೇತನ್ ನಿರಾಳಕರ, ರಾಜಶೇಖರ್ ಹೊಸಮನಿ, ರಾಜು ಎಲಕಪಳ್ಳಿ, ವಿವೇಕ್ ಗಂಗನ್, ಗೈಬಣ್ಣ ವಾಲಿಕಾರ, ರಾಜಶೇಖರ್ ಮೌರ್ಯ, ವಿಶ್ವನಾಥ್ ವಾಲಿಕಾರ ದಸ್ತಾಪುರ, ಮಾರುತಿ ಕೊಳ್ಳುರ್, ಕಾಶೀನಾಥ್ ಶಿಂದೆ, ಆರ್. ಗಣಪತ್ ರಾವ್, ಡ ಜಗನಾಥ್ ಡಾಕ್ಟರ್, ಸತೀಶ್ ದೇಗಲ್ಮಡಿ, ಪ್ರೇಮಕುಮಾರ್ ಗಾರಂಪಳ್ಳಿ, ದೇವೇಂದ್ರಪ್ಪ ಜಾಬೀನ್, ಜಗನ್ನಾಥ್ ಗಂಜಗೇರಿ, ರಮೇಶ್ ಕುಸರಂಪಳ್ಳಿ, ಜೈಭೀಮ್ ಹೊಲ್ಕರ್, ಸಂಜು ಸಾಸರಗಾವ್, ಬಸವರಾಜ್ ಶಿರಸಿ, ರಘು ದಳಪತಿ, ಗೌತಮ್ ಇತಪುರ, ಅಭಿಜಿತ್ ಕೊರವಿ, ಆನಂದ್ ಗುರಂಪಳ್ಳಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಮಾಜದ ಯುವಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
#ಚಿಂಚೋಳಿ #KalaburagiNews
#ಪರಿಶಿಷ್ಟಜಾತಿ #SCReservation
#ಸಾಮಾಜಿಕ_ನ್ಯಾಯ #SocialJustice
#ಪ್ರತಿಭಟನೆ #ಕನ್ನಡಸಾಮ್ರಾಟ್ #karnatakanews






