Home » ನ್ಯೂಸ್ » ರಾಜ್ಯ » ಕಲಬುರಗಿ ನಾಟಕೋತ್ಸವ-2026ಕ್ಕೆ ಅದ್ದೂರಿ ಚಾಲನೆ: ರಂಗಭೂಮಿ ಪೋಷಣೆಗೆ ಸರ್ಕಾರದ ಬೆಂಬಲ ಅತ್ಯಗತ್ಯ – ಎಂ.ವೈ.ಪಾಟೀಲ

ಕಲಬುರಗಿ ನಾಟಕೋತ್ಸವ-2026ಕ್ಕೆ ಅದ್ದೂರಿ ಚಾಲನೆ: ರಂಗಭೂಮಿ ಪೋಷಣೆಗೆ ಸರ್ಕಾರದ ಬೆಂಬಲ ಅತ್ಯಗತ್ಯ – ಎಂ.ವೈ.ಪಾಟೀಲ

ಕಲಬುರಗಿ ನಾಟಕೋತ್ಸವ-2026ಕ್ಕೆ ಅದ್ದೂರಿ ಚಾಲನೆ: ರಂಗಭೂಮಿ ಪೋಷಣೆಗೆ ಸರ್ಕಾರದ ಬೆಂಬಲ ಅತ್ಯಗತ್ಯ – ಎಂ.ವೈ.ಪಾಟೀಲ

ಮುಖ್ಯಾಂಶಗಳು:

  • ​ರಂಗ ಶಂಕರ ಸಹಯೋಗದಲ್ಲಿ 7 ದಿನಗಳ ಕಾಲ ಕಲ್ಯಾಣ ನಾಡಿನಲ್ಲಿ ನಾಟಕಗಳ ರಸದೌತಣ.
  • ​ನಮ್ಮ ಉತ್ತರ ಕರ್ನಾಟಕದ ‘ದೊಡ್ಡಾಟ’ಕ್ಕೂ ಸಿಗಬೇಕು ಯಕ್ಷಗಾನದಂತಹ ಜಾಗತಿಕ ಮನ್ನಣೆ: ಶಾಸಕ ಎಂ.ವೈ. ಪಾಟೀಲ.
  • ​ಮೊಬೈಲ್ ಗಳು ಬಿಟ್ಟು ರಂಗಭೂಮಿಯತ್ತ ಯುವಜನತೆ ಮುಖಮಾಡುವಂತೆ ಆರ್.ಸಿ ಜಹೀರಾ ನಸೀಮ್ ಕರೆ.
  • ​ಶಂಕರ್ ನಾಗ್ ನೆನಪು ಹಂಚಿಕೊಂಡು ಭಾವುಕರಾದ ಅರುಂಧತಿ ನಾಗ್; ‘ನಾಟಕ ನೋಡಿ, ಜೀವನ ಬದಲಾಗುತ್ತೆ’ ಎಂಬ ಸಂದೇಶ.

ಕಲಬುರಗಿ : ಕಲೆ, ಸಾಹಿತ್ಯ ಹಾಗೂ ರಂಗಭೂಮಿಯ ತವರೂರಾದ ಕರ್ನಾಟಕದಲ್ಲಿ ರಂಗಚಟುವಟಿಕೆಗಳಿಗೆ ಮತ್ತಷ್ಟು ಜೀವ ತುಂಬುವ ಮಹತ್ವದ ಹೆಜ್ಜೆಯಾಗಿ ಬಹುನಿರೀಕ್ಷಿತ ‘ಕಲಬುರಗಿ ನಾಟಕೋತ್ಸವ-2026’ಕ್ಕೆ ಶನಿವಾರ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

​ಕಲಬುರಗಿ ಜಿಲ್ಲಾಡಳಿತ, ನೆಕ್ಸ್ಟ್ ಫೌಂಡೇಷನ್ ಹಾಗೂ ಬೆಂಗಳೂರಿನ ಸುಪ್ರಸಿದ್ಧ ‘ರಂಗ ಶಂಕರ’ ಸಂಸ್ಥೆಯ ಜಂಟಿ ಆಶ್ರಯದಲ್ಲಿ ನಗರದ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಫೆಬ್ರವರಿ 21 ರಿಂದ 28 ರವರೆಗೆ ಈ ರಂಗ ಸಪ್ತಾಹ ನಡೆಯಲಿದ್ದು, ಕಲ್ಯಾಣ ನಾಡಿನ ಕಲಾಭಿಮಾನಿಗಳಿಗೆ ರಸದೌತಣ ಶುರುವಾಗಿದೆ.

‘ದೊಡ್ಡಾಟ’ಕ್ಕೂ ಸಿಗಲಿ ಯಕ್ಷಗಾನದ ಸ್ಥಾನಮಾನ:

ಕಾರ್ಯಕ್ರಮದಲ್ಲಿ ನಗಾರಿ ಬಾರಿಸುವ ಮೂಲಕ ನಾಟಕೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದ ಶಾಸಕ ಎಂ.ವೈ. ಪಾಟೀಲ, ಕಲೆ ಮತ್ತು ಸಂಗೀತದ ಪೋಷಣೆಯಲ್ಲಿ ಸರ್ಕಾರದ ಜವಾಬ್ದಾರಿಯನ್ನು ಒತ್ತಿ ಹೇಳಿದರು. “ಸರ್ವರೋಗಕ್ಕೂ ಸಂಗೀತವೇ ಮದ್ದು ಎನ್ನುವ ಮಾತಿದೆ. ಕಲೆ, ಸಂಸ್ಕೃತಿಯನ್ನು ನಮ್ಮ ಮುಂದಿನ ಯುವ ಪೀಳಿಗೆಗೆ ದಾಟಿಸುವ ನಿಟ್ಟಿನಲ್ಲಿ ಸರ್ಕಾರವು ರಂಗಭೂಮಿಗೆ ಹೆಚ್ಚಿನ ಆರ್ಥಿಕ ಶಕ್ತಿ ನೀಡಿ ಪೋಷಿಸಬೇಕಿದೆ,” ಎಂದರು.

​ಇದೇ ವೇಳೆ ಉತ್ತರ ಕರ್ನಾಟಕದ ವಿಶಿಷ್ಟ ಕಲೆಯ ಬಗ್ಗೆ ದನಿ ಎತ್ತಿದ ಅವರು, “ಮಂಗಳೂರಿನ ಯಕ್ಷಗಾನ ಇಂದು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಆದರೆ, ನಮ್ಮಲ್ಲಿನ ‘ದೊಡ್ಡಾಟ’ ಕೂಡ ಅಷ್ಟೇ ಅದ್ಭುತವಾಗಿದ್ದರೂ, ಪ್ರಚಾರದ ಕೊರತೆಯಿಂದ ಎಲೆಮರೆಯ ಕಾಯಾಗಿಯೇ ಉಳಿದಿದೆ. ಅದಕ್ಕೂ ಸೂಕ್ತ ವೇದಿಕೆ ಮತ್ತು ಜಾಗತಿಕ ಮನ್ನಣೆ ಸಿಗಬೇಕು. ಸುಜಾತಾ ಜಂಗಮಶೆಟ್ಟಿ ಅವರ ನೇತೃತ್ವದಲ್ಲಿ ಕಲಬುರಗಿ ರಂಗಾಯಣ ಈ ನಿಟ್ಟಿನಲ್ಲಿ ಭರವಸೆಯ ಹೆಜ್ಜೆ ಇಟ್ಟಿದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೊಬೈಲ್ ಜಗತ್ತಿನಿಂದ ಹೊರಬನ್ನಿ:

ವೇದಿಕೆಯಲ್ಲಿ ಉಪಸ್ಥಿತರಿದ್ದ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್, ಇಂದಿನ ಯುವಜನತೆಗೆ ಕಿವಿಮಾತು ಹೇಳಿದರು. “ರಂಗ ಶಂಕರ ಸಂಸ್ಥೆ ಸತತ ಏಳು ದಿನಗಳ ಕಾಲ ನಾಟಕಗಳ ಅದ್ಭುತ ಪ್ಯಾಕೇಜ್ ಅನ್ನು ಕಲಬುರಗಿಗೆ ತಂದಿದೆ. ಇಂದಿನ ಯುವ ಸಮೂಹ ಸದಾ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಳೆದುಹೋಗುತ್ತಿದೆ. ಆ ವಾಸ್ತವವಲ್ಲದ ಜಗತ್ತಿನಿಂದ ಹೊರಬಂದು, ಇಂತಹ ಜೀವಂತ ಕಲಾ ಪ್ರದರ್ಶನಗಳನ್ನು ನೋಡಬೇಕು,” ಎಂದು ಕರೆ ನೀಡಿದರು.

‘ನಾಟಕ ನೋಡಿ, ನಿಮ್ಮ ಜೀವನವೇ ಬದಲಾಗುತ್ತೆ’ – ಅರುಂಧತಿ ನಾಗ್ ಭಾವುಕ ನುಡಿ:

ರಂಗ ಶಂಕರದ ಸಂಸ್ಥಾಪಕಿ ಹಾಗೂ ಹಿರಿಯ ರಂಗಕರ್ಮಿ ಅರುಂಧತಿ ನಾಗ್ ಅವರ ಮಾತುಗಳು ನೆರೆದಿದ್ದವರ ಮನಕಲಕಿದವು. ಸುಮಾರು 40 ವರ್ಷಗಳ ಅಪಾರ ಅನುಭವವಿರುವ ರಂಗತಂಡಗಳು ಈ ಉತ್ಸವದಲ್ಲಿ ವಿಭಿನ್ನ ನಾಟಕಗಳನ್ನು ಪ್ರದರ್ಶಿಸಲಿವೆ ಎಂದ ಅವರು, “ಕಲಬುರಗಿಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಾಟಕ ನೋಡಬೇಕು. ರಂಗಭೂಮಿ ಕೇವಲ ಮನರಂಜನೆಯಲ್ಲ, ಅದು ಮನುಷ್ಯನ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ,” ಎಂದು ಅಭಿಮಾನದಿಂದ ಹೇಳಿದರು.

​ತಮ್ಮ ಪ್ರೀತಿಯ ಪತಿ, ದಿವಂಗತ ಶಂಕರ್ ನಾಗ್ ಅವರನ್ನು ಸ್ಮರಿಸಿದ ಅವರು, “ಶಂಕರ್ ನನ್ನ ಕಾಲೇಜು ದಿನಗಳ ಗೆಳೆಯ, ಅತ್ಯುತ್ತಮ ನಟ ಹಾಗೂ ಅದ್ಭುತ ಮನುಷ್ಯ. ನಮ್ಮಿಬ್ಬರನ್ನೂ ಬೆಸೆದದ್ದೇ ಈ ರಂಗಭೂಮಿ. ಅವರ ಸವಿನೆನಪಿಗಾಗಿಯೇ 21 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ರಂಗ ಶಂಕರ ಕಟ್ಟಿದೆವು. ಕೇವಲ 2,500 ರೂ.ಗಳ ಅತ್ಯಲ್ಪ ಬಾಡಿಗೆಯಲ್ಲಿ ನಾಟಕ ಪ್ರದರ್ಶನಕ್ಕೆ ವೇದಿಕೆ ನೀಡುತ್ತಿದ್ದೇವೆ. ಅಲ್ಲಿ ಮದುವೆಗೋ, ಫ್ಯಾಷನ್ ಶೋಗಳಿಗೋ ಜಾಗವಿಲ್ಲ; ರಂಗ ಶಂಕರದ ಉಸಿರೇನಿದ್ದರೂ ಕೇವಲ ನಾಟಕಗಳಿಗೆ ಮಾತ್ರ ಮೀಸಲು,” ಎಂದು ಭಾವುಕರಾಗಿ ನುಡಿದರು.

ಗಣ್ಯರ ದಂಡು:

ಉದ್ಘಾಟನಾ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ್, ತಿಪ್ಪಣ್ಣಪ್ಪ ಕಮಕನೂರ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಮೇಯರ್ ವರ್ಷಾ ರಾಜೀವ ಜಾನೆ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಎಸ್.ಪಿ ಅಡ್ಡೂರು ಶ್ರೀನಿವಾಸಲು, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯಾ ಆಲದಕಟ್ಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ, ಕಲಬುರಗಿ ರಂಗಾಯಣದ ಆಡಳಿತಾಧಿಕಾರಿ ಸಿದ್ರಾಮ ಶಿಂಧೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

​ಕಲಬುರಗಿ ರಂಗಾಯಣದ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಶಿವಾನಂದ ಅಣಜಗಿ ಕಾರ್ಯಕ್ರಮ ನಿರೂಪಿಸಿದರು.

ವರದಿ: ಆರ್. ಕೋಸ್ಟಿ, ವಿಶೇಷ ಪ್ರತಿನಿಧಿ | ಕನ್ನಡ ಸಾಮ್ರಾಟ್ ನ್ಯೂಸ್

Share This

Facebook
X
WhatsApp
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments

ಇತ್ತೀಚಿನ ಸುದ್ದಿಗಳು