ಸಿದ್ದರಾಮಯ್ಯ-ಡಿಕೆಶಿ ನಡುವೆ ಪವರ್ ಶೇರಿಂಗ್ ಫಿಕ್ಸ್? ದೆಹಲಿ ವಿಮಾನ ಏರುವ ಮುನ್ನ ಡಿ.ಕೆ. ಶಿವಕುಮಾರ್ ನೀಡಿದ ಆ ಒಂದು ಹೇಳಿಕೆ ಈಗ ಸಂಚಲನ!
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಕಳೆದ ಕೆಲವು ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ‘ನಾಯಕತ್ವ ಬದಲಾವಣೆ’ ಹಾಗೂ ‘ಅಧಿಕಾರ ಹಂಚಿಕೆ’ಯ ವಿಚಾರ ಈಗ ದಿಢೀರ್ ಸ್ಪೋಟಗೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಒಂದು ಹೇಳಿಕೆ, ಕೈ ಪಡೆಯಲ್ಲಿ ದೊಡ್ಡ ಮಟ್ಟದ ಬಿರುಗಾಳಿಯನ್ನೇ ಎಬ್ಬಿಸಿದೆ.
ಬಜೆಟ್ ಪೂರ್ವಭಾವಿ ಸಭೆಗೆ ಗೈರು: ದೆಹಲಿಗೆ ಹಾರಿದ ಡಿಕೆಶಿ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಹಮ್ಮಿಕೊಂಡಿದ್ದ ಮಹತ್ವದ ಬಜೆಟ್ ಪೂರ್ವಭಾವಿ ಸಭೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನಿರೀಕ್ಷಿತವಾಗಿ ಗೈರಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸಭೆಯಲ್ಲಿ ಹಾಜರಿರಬೇಕಾದ ಡಿಕೆಶಿ ಅವರು ಇದ್ದಕ್ಕಿದ್ದಂತೆ ದೆಹಲಿ ವಿಮಾನ ಏರಿದ್ದು ರಾಜಕೀಯ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಅಧಿಕಾರ ಹಂಚಿಕೆ ಬಗ್ಗೆ ಕೊನೆಗೂ ಮೌನ ಮುರಿದ ‘ಬಂಡೆ’
ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಮೊದಲ ಬಾರಿಗೆ ಅಧಿಕಾರ ಹಂಚಿಕೆಯ (Power Sharing) ಬಗ್ಗೆ ನೇರವಾದ ಸುಳಿವು ನೀಡಿದ್ದಾರೆ.
> “ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಏನು ಮಾತುಕತೆ ನಡೆದಿದೆ ಎಂಬುದು ನಮಗೆ ಮಾತ್ರ ಗೊತ್ತು. ನಾವಿಬ್ಬರೂ ಕುಳಿತು ಒಪ್ಪಂದ ಮಾಡಿಕೊಂಡಿದ್ದೇವೆ. ಅದು ನಮ್ಮಿಬ್ಬರ ವೈಯಕ್ತಿಕ ವಿಚಾರ. ಬೇರೆಯವರು ಇದರ ಬಗ್ಗೆ ಮಾತನಾಡುವುದು ಸರಿಯಲ್ಲ,” ಎಂದು ಹೇಳುವ ಮೂಲಕ ಪರೋಕ್ಷವಾಗಿ ‘ಅಧಿಕಾರ ಹಂಚಿಕೆ’ಯ ಒಪ್ಪಂದ ನಡೆದಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
>
ದಹಲಿಯಲ್ಲಿ ಯಾರ ಭೇಟಿ? ಗುಟ್ಟು ಬಿಟ್ಟುಕೊಡದ ಡಿಕೆಶಿ
ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿರುವ ಡಿಕೆಶಿ, ಈ ಪ್ರವಾಸದ ಉದ್ದೇಶದ ಬಗ್ಗೆ ಸ್ಪಷ್ಟನೆ ನೀಡಲಿಲ್ಲ. “ದೆಹಲಿಗೆ ಹೋದ ಮೇಲೆ ಅಲ್ಲಿ ಸಿಗುವ ಎಲ್ಲ ಪ್ರಮುಖ ನಾಯಕರನ್ನು ಭೇಟಿ ಮಾಡುತ್ತೇನೆ. ಟೀಕೆಗಳು ಬರುವುದು ಸಹಜ, ಅದನ್ನು ಎದುರಿಸಬೇಕು. ಪ್ರತಿ ದಿನವೂ ನಮಗೆ ಕೆಲಸವಿದ್ದೇ ಇರುತ್ತದೆ,” ಎಂದು ಮಾರ್ಮಿಕವಾಗಿ ಉತ್ತರಿಸಿ ದೆಹಲಿ ವಿಮಾನ ಹತ್ತಿದರು.
ಕೈ ಪಾಳಯದಲ್ಲಿ ಶುರುವಾಯ್ತಾ ನಡುಕ?
ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ತೆರೆಮರೆಯಲ್ಲಿ ದೊಡ್ಡ ಮಟ್ಟದ ‘ಡೀಲ್’ ನಡೆದಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಹೈಕಮಾಂಡ್ ನಾಯಕರು ಇವರ ನಡುವಿನ ಭಿನ್ನಮತವನ್ನು ಹೇಗೆ ಶಮನ ಮಾಡಲಿದ್ದಾರೆ? ಮುಂಬರುವ ದಿನಗಳಲ್ಲಿ ಕರ್ನಾಟಕ ರಾಜಕಾರಣದಲ್ಲಿ ‘ಕುರ್ಚಿ ಬದಲಾವಣೆ’ಯ ಪರ್ವ ಶುರುವಾಗಲಿದೆಯೇ? ಕಾದು ನೋಡಬೇಕಿದೆ.
ಹೆಚ್ಚಿನ ರಾಜಕೀಯ ಅಪ್‌ಡೇಟ್‌ಗಳಿಗಾಗಿ ನೋಡ್ತಾ ಇರಿ – ‘ಕನ್ನಡ ಸಾಮ್ರಾಟ್’ ನ್ಯೂಸ್ ಪೋರ್ಟಲ್.






