ವಚನ ಸಾಹಿತ್ಯ ರಕ್ಷಣೆ ನಮ್ಮೆಲ್ಲರ ಹೊಣೆ: ಕಾಯಕ ಯೋಗಿ ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಕರೆ
ಕಲಬುರಗಿ: ಸಮಾಜದ ಇಂದಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕೇವಲ ಭಾಷಣಗಳಲ್ಲಿಲ್ಲ, ಅದು 12ನೇ ಶತಮಾನದ ಶರಣರ ವಚನಗಳಲ್ಲಿದೆ. ಈ ಅಮೂಲ್ಯ ಸಾಹಿತ್ಯ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಆಶಯ ವ್ಯಕ್ತಪಡಿಸಿದರು.
ನಗರದ ಡಾ. ಎಸ್. ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಮಡಿವಾಳ ಮಾಚಿದೇವರ ಜಯಂತೋತ್ಸವ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.
ವಚನ ರಕ್ಷಕ ಮಡಿವಾಳ ಮಾಚಿದೇವ
12ನೇ ಶತಮಾನದ ಕ್ರಾಂತಿಯಲ್ಲಿ ಮಡಿವಾಳ ಮಾಚಿದೇವರ ಪಾತ್ರ ಅನನ್ಯವಾದುದು. ಶರಣರ ವಚನ ಸಾಹಿತ್ಯದ ರಕ್ಷಣೆಗಾಗಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದ ಶಾಸಕರು, “ಕಾಯಕವೇ ಕೈಲಾಸ ಎಂದು ನಂಬಿದ್ದ ಮಾಚಿದೇವರು ಬಟ್ಟೆ ಮಡಿ ಮಾಡುವ ಕಾಯಕದ ಮೂಲಕವೇ ಸಮಾಜದ ಕಲ್ಮಶಗಳನ್ನು ತೊಳೆಯುವ ಸಂದೇಶ ನೀಡಿದರು. ಅಂಬಿಗರ ಚೌಡಯ್ಯ, ಡೋಹರ ಕಕ್ಕಯ್ಯರಂತಹ ಶರಣರು ತಮ್ಮ ಕಾಯಕದ ಮೂಲಕವೇ ಸಮಾಜದ ಏಳಿಗೆಗೆ ಶ್ರಮಿಸಿದ್ದಾರೆ,” ಎಂದು ಬಣ್ಣಿಸಿದರು.
ಸಮಾನತೆಯ ಹಾದಿಯಲ್ಲಿ ಸಾಗೋಣ
ಬುದ್ಧ, ಬಸವಣ್ಣನವರಿಂದ ಹಿಡಿದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ವರೆಗೂ ಎಲ್ಲರೂ ಸಮಾನತೆಗಾಗಿ ಹೋರಾಡಿದ್ದಾರೆ. ಜಯಂತಿಗಳು ಕೇವಲ ಸಾಂಪ್ರದಾಯಿಕ ಆಚರಣೆಗಳಾಗಬಾರದು. ಬದಲಾಗಿ, ಈ ಮಹಾಪುರುಷರ ತತ್ತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವಾಗಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯಾಂಶಗಳು:
- ವಿಶೇಷ ಉಪನ್ಯಾಸ: ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಶ್ರೀ ಸಂಜಯ್ ಮಾಕಲ್ ಅವರು ಮಾಚಿದೇವರ ಜೀವನ ಮತ್ತು ಸಂದೇಶದ ಕುರಿತು ಬೆಳಕು ಚೆಲ್ಲಿದರು.
- ದಿವ್ಯ ಸಾನ್ನಿಧ್ಯ: ಶ್ರೀನಿವಾಸ ಸರಡಗಿ ಹಾಗೂ ತಾಜ ಸುಲ್ತಾನಪುರ ಹಿರೇಮಠದ ಶ್ರೀ ಷ.ಬ್ರ. ಡಾ. ರೇವಣಸಿದ್ದ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
- ಶುಭಾರಂಭ: ಬೆಳಿಗ್ಗೆ ಹುಮ್ನಾಬಾದ್ ರಿಂಗ್ ರಸ್ತೆಯ ಮಾಚಿದೇವ ವೃತ್ತದಲ್ಲಿ ಕತೃಗದ್ದಿಗೆ ಪೂಜೆ ನೆರವೇರಿಸುವ ಮೂಲಕ ಜಯಂತೋತ್ಸವಕ್ಕೆ ಚಾಲನೆ ನೀಡಲಾಯಿತು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ್ ಪಾಟೀಲ್ ತೆಗಲತಿಪ್ಪಿ, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ರವಿಕುಮಾರ ಶಹಾಪೂರಕರ್, ಗೌರವಾಧ್ಯಕ್ಷ ಶಿವಪುತ್ರ ಮಲ್ಲಾಭಾಕರ್, ಕಾರ್ಯದರ್ಶಿ ಶಾಂತಕುಮಾರ್ ಕಣ್ಣೂರ್ ಹಾಗೂ ಸಮಾಜದ ಪ್ರಮುಖರಾದ ಚಂದ್ರಶೇಖರ್, ಲಿಂಗಪ್ಪ ಮಡಿವಾಳ್, ಸಂಜು ಮಡಿವಾಳ ಸೇರಿದಂತೆ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ಅ ನಾಸಿ ಅವರು ಗಣ್ಯರನ್ನು ಸ್ವಾಗತಿಸಿದರು.
#Kalaburagi #MadivalaMachidevaJayanti #AllamaprabhuPatil #VachanaSahitya #KannadaSamrat #KarnatakaNews #SocialEquality #Basavanna




