ಕಲಬುರಗಿ: ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಜಿಲ್ಲಾಧಿಕಾರಿ ಖಡಕ್ ಸೂಚನೆ; ನಿರ್ಲಕ್ಷ್ಯ ತೋರುವ ಮುಖ್ಯಗುರುಗಳಿಗೆ ನೋಟಿಸ್!
ಕಲಬುರಗಿ: ಜಿಲ್ಲೆಯ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. “ಪ್ರತಿಯೊಂದು ಶಾಲೆಯೂ ಶೇ. 100ರಷ್ಟು ಫಲಿತಾಂಶ ಪಡೆಯುವ ಗುರಿ ಹೊಂದಿರಬೇಕು. ಕೇವಲ ತೇರ್ಗಡೆ ಮುಖ್ಯವಲ್ಲ, ವಿದ್ಯಾರ್ಥಿಗಳು ಗಳಿಸುವ ಅಂಕಗಳ ಗುಣಮಟ್ಟವೂ ಸುಧಾರಿಸಬೇಕು,” ಎಂದು ಅವರು ತಿಳಿಸಿದರು.
ಶುಕ್ರವಾರ ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ “2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣಾ ಕಾರ್ಯಾಗಾರ” ದಲ್ಲಿ ಮುಖ್ಯಗುರುಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗೈರಾದ ಮುಖ್ಯಗುರುಗಳಿಗೆ ಶಾಕ್!
ಕಾರ್ಯಾಗಾರಕ್ಕೆ ಹಾಜರಾಗದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಅಂತಹ ಶಿಕ್ಷಕರಿಗೆ ಕೂಡಲೇ ನೋಟಿಸ್ ಜಾರಿ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ (DDPI) ಶಂಕ್ರಮ್ಮ ಡವಳಗಿ ಅವರಿಗೆ ವೇದಿಕೆಯ ಮೇಲೆಯೇ ಖಡಕ್ ನಿರ್ದೇಶನ ನೀಡಿದರು.
ವಿದ್ಯಾರ್ಥಿಗಳನ್ನು ದತ್ತು ಪಡೆಯಿರಿ: ಡಿಸಿ ಕರೆ
ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಿ, ಶಿಕ್ಷಕರು ಅಂತಹ ಮಕ್ಕಳನ್ನು ‘ದತ್ತು’ ಪಡೆದು ವಿಶೇಷ ತರಬೇತಿ ನೀಡಬೇಕು. ಕಳೆದ ವರ್ಷ ಜಿಲ್ಲೆಯ ಫಲಿತಾಂಶ ಕುಸಿದಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಿಸಿ, “ಫಲಿತಾಂಶ ಸುಧಾರಣೆ ಎನ್ನುವುದು ಕೇವಲ ಅಧಿಕಾರಿಗಳ ಜವಾಬ್ದಾರಿಯಲ್ಲ, ಇದು ಪ್ರತಿಯೊಬ್ಬ ಶಿಕ್ಷಕನ ಆದ್ಯ ಕರ್ತವ್ಯ,” ಎಂದು ಎಚ್ಚರಿಸಿದರು.
ಕೇವಲ 54 ದಿನಗಳ ಗಡುವು: ಸಿಇಒ ಸಲಹೆ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಭಂವರ ಸಿಂಗ್ ಮೀನಾ ಮಾತನಾಡಿ, “ಪರೀಕ್ಷೆಗೆ ಇನ್ನು ಕೇವಲ 54 ದಿನಗಳು ಮಾತ್ರ ಬಾಕಿ ಇವೆ. ಈ ಅಲ್ಪ ಅವಧಿಯಲ್ಲಿ ಮೈಕ್ರೋ ಪ್ಲಾನ್ (Micro Plan) ಮಾಡಿಕೊಳ್ಳುವುದು ಅನಿವಾರ್ಯ. ಸರ್ಕಾರದ ‘ಮಿಷನ್ 40+’ ಹಾಗೂ ’29 ಅಂಶಗಳ’ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ,” ಎಂದರು. ವಿದ್ಯಾರ್ಥಿಗಳ ಪ್ರಗತಿ ಬಗ್ಗೆ ಪೋಷಕರೊಂದಿಗೆ ನಿರಂತರ ಚರ್ಚೆ ನಡೆಸಿ, ಮನೆಯಲ್ಲಿ ಓದಿಗೆ ಪೂರಕ ವಾತಾವರಣ ಇರುವಂತೆ ನೋಡಿಕೊಳ್ಳಲು ಸೂಚಿಸಿದರು.
ಯಶಸ್ಸಿನ ಸೂತ್ರಗಳು:
-
ಬ್ಲೂ ಪ್ರಿಂಟ್ ಅಭ್ಯಾಸ: ನೀಲನಕ್ಷೆಯ ಪ್ರಕಾರ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸುವುದು.
-
ಪಾಸಿಂಗ್ ಪ್ಯಾಕೇಜ್: ಉತ್ತೀರ್ಣರಾಗಲು ಕಷ್ಟಪಡುವ ವಿದ್ಯಾರ್ಥಿಗಳಿಗೆ ವಿಶೇಷ ಪಾಸಿಂಗ್ ಪ್ಯಾಕೇಜ್ ಸಿದ್ಧಪಡಿಸುವುದು.
-
ಡಿಜಿಟಲ್ ನೆರವು: ವಾಟ್ಸ್ ಆ್ಯಪ್ ಗ್ರೂಪ್ಗಳ ಮೂಲಕ ಪರೀಕ್ಷೆಗೆ ಪೂರಕವಾದ ಬೋಧನಾ ಸಾಮಗ್ರಿಗಳನ್ನು ಒದಗಿಸುವುದು.
-
ಮಕ್ಕಳ ಗುಂಪು: ಅಫಜಲಪುರ ತಾಲೂಕಿನ ಕೋಗನೂರು ಶಾಲೆಯ ಮಾದರಿಯಂತೆ, 4-5 ಮಕ್ಕಳನ್ನು ಒಬ್ಬ ಶಿಕ್ಷಕರು ದತ್ತು ಪಡೆದು ಮೂಲಭೂತ ಗಣಿತ ಹಾಗೂ ಭಾಷಾ ಕಲಿಕೆಗೆ ಒತ್ತು ನೀಡುವುದು.
ಕಾರ್ಯಾಗಾರದಲ್ಲಿ ಡಯಟ್ ಪ್ರಾಂಶುಪಾಲರಾದ ಬಸವರಾಜ ಶೆಟ್ಟಿ ಅವರು ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಅಪರ ಆಯುಕ್ತರ ಕಚೇರಿಯ ಸಹ ನಿರ್ದೇಶಕ ನಾಗೂರು, ವಿವಿಧ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ಹಾಗೂ ಜಿಲ್ಲೆಯ ನೂರಾರು ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.
ವರದಿ: ಕನ್ನಡ ಸಾಮ್ರಾಟ್ ನ್ಯೂಸ್ ಬ್ಯೂರೋ, ಕಲಬುರಗಿ.
#KannadaSamrat #ShivaSS #SSLC2026 #KarnatakaEducation #KalaburagiNews #SSLCExam #EducationUpdates #KarnatakaSSLC #SuccessMantra #StudentMotivation #KannadaNews #KalaburagiDistrict #ExamPreparation #EducationalReform #KalyanaKarnataka




