ವಿಶೇಷ ವರದಿ:
ಕನ್ನಡ ಸಾಮ್ರಾಟ್
ಕಲಬುರಗಿ: ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸುವುದು ಕೇವಲ ಆಯ್ಕೆಯಲ್ಲ, ಅದು ಕಾನೂನುಬದ್ಧ ಕಡ್ಡಾಯ. ಹತ್ತಕ್ಕಿಂತ ಹೆಚ್ಚು ಸಿಬ್ಬಂದಿ ಹೊಂದಿರುವ ಪ್ರತಿಯೊಂದು ಸರ್ಕಾರಿ ಕಚೇರಿ ಹಾಗೂ ಖಾಸಗಿ ಸಂಸ್ಥೆಗಳು ‘ಆಂತರಿಕ ದೂರು ನಿವಾರಣಾ ಸಮಿತಿ’ಯನ್ನು (Internal Complaints Committee) ಕಡ್ಡಾಯವಾಗಿ ರಚಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ ನವಲೆ ಅವರು ಕಟ್ಟುನಿಟ್ಟಿನ ಆದೇಶ ನೀಡಿದರು.
ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ (POSH) ಕಾಯ್ದೆ-2013” ಮತ್ತು “ಕೌಟುಂಬಿಕ ದೌರ್ಜನ್ಯ ಸಂರಕ್ಷಣಾ ಕಾಯ್ದೆ-2005” ರ ಕುರಿತಾದ ಎರಡು ದಿನಗಳ ಓರಿಯೆಂಟೇಷನ್ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮಾನತೆಯ ಹಕ್ಕು ಸಂವಿಧಾನದ ಕೊಡುಗೆ:
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಸ್ಥಿತಿ ಹಿಂದೆ ಆತಂಕಕಾರಿಯಾಗಿತ್ತು. ಆದರೆ ಇಂದು ಸಂವಿಧಾನ ನಮಗೆ ಸಮಾನತೆಯ ಹಕ್ಕನ್ನು ನೀಡಿದೆ. ಅಧಿಕಾರಿಗಳು ಕೇವಲ ಕಚೇರಿ ಕೆಲಸಕ್ಕೆ ಸೀಮಿತವಾಗದೆ, ಮಹಿಳೆಯರಿಗೆ ಕಾನೂನು ಅರಿವು ಮೂಡಿಸುವಲ್ಲಿ ಸಕ್ರಿಯರಾಗಬೇಕು. ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ನ್ಯಾಯ ಒದಗಿಸಲು ಕಾನೂನಿನಲ್ಲಿ ಭದ್ರ ಬುನಾದಿಯಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.
ಕಾನೂನು ಉಲ್ಲಂಘನೆ ಸಮಾಜಕ್ಕೆ ಸವಾಲು: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಮಾತನಾಡಿ, “ದೇಶದಲ್ಲಿ ಎಷ್ಟೇ ಕಠಿಣ ಕಾನೂನುಗಳಿದ್ದರೂ, ವ್ಯಾಪಕ ಪ್ರಚಾರ ನಡೆದಿದ್ದರೂ ಕಾನೂನು ಉಲ್ಲಂಘನೆಯಾಗುತ್ತಿರುವುದು ಇಡೀ ಸಮಾಜಕ್ಕೆ ದೊಡ್ಡ ಸವಾಲಾಗಿದೆ. ಕೌಟುಂಬಿಕ ದೌರ್ಜನ್ಯದಂತಹ ಪ್ರಕರಣಗಳನ್ನು ಸೆಕ್ಷನ್ 12, 18, 19 ಮತ್ತು 20ರ ಅಡಿಯಲ್ಲಿ 60 ದಿನಗಳ ಒಳಗಾಗಿ ವಿಲೇವಾರಿ ಮಾಡಲು ನ್ಯಾಯಾಲಯಗಳಿಗೆ ನಿರ್ದೇಶನ ನೀಡಬೇಕಿದೆ. ನ್ಯಾಯದ ಪರವಾಗಿ ನಿಲ್ಲಲು ಮಹಿಳೆಯರು ಭಯಪಡುವ ಅಗತ್ಯವಿಲ್ಲ,” ಎಂದು ಧೈರ್ಯ ತುಂಬಿದರು.
ಪೊಲೀಸ್ ಇಲಾಖೆಯ ಅಭಯ: 112 ಸಹಾಯವಾಣಿ ಬಳಸಿ
ನಗರ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್. ಡಿ ಅವರು ಮಾತನಾಡಿ, “ಲೈಂಗಿಕ ಕಿರುಕುಳವನ್ನು ಮೌನವಾಗಿ ಸಹಿಸಬೇಡಿ. ಕಿರುಕುಳ ನೀಡುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ದೂರು ನೀಡಿ. ಸಂಕಷ್ಟದ ಸಮಯದಲ್ಲಿ ‘112’ ಸಹಾಯವಾಣಿಗೆ ಕರೆ ಮಾಡಿದರೆ ಕೇವಲ 10 ನಿಮಿಷದಲ್ಲಿ ಪೊಲೀಸರು ನಿಮ್ಮ ಸ್ಥಳಕ್ಕೆ ಧಾವಿಸುತ್ತಾರೆ. ಆನ್‌ಲೈನ್ ಮೂಲಕ ದೂರು ನೀಡಲು ‘She-Box’ ಪೋರ್ಟಲ್ ಬಳಸಬಹುದು,” ಎಂದು ಮಾಹಿತಿ ನೀಡಿದರು.
ಮಹಿಳಾ ಹಿತರಕ್ಷಣೆಗೆ ನಮ್ಮ ಆದ್ಯತೆ: ಭಂವರ್ ಸಿಂಗ್ ಮೀನಾ
ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಚೇರಿಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ಹಾಗೂ ಸುರಕ್ಷತಾ ಸೌಲಭ್ಯ ಒದಗಿಸುವುದು ಇಲಾಖೆಯ ಜವಾಬ್ದಾರಿಯಾಗಿದೆ. ಗ್ರಾಮೀಣ ಮಟ್ಟದ ಮಹಿಳೆಯರ ಸಬಲೀಕರಣಕ್ಕಾಗಿ ‘ಕೂಸಿನ ಮನೆ’ಯಂತಹ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಗಣ್ಯರ ಉಪಸ್ಥಿತಿ: ಇದೇ ಸಂದರ್ಭದಲ್ಲಿ ಕಾನೂನು ಅರಿವಿನ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಸಂಪನ್ಮೂಲ ವ್ಯಕ್ತಿ ವಿನೋದ್ ಕುಮಾರ್ ಪಿಪಿಟಿ ಮೂಲಕ ಕಾಯ್ದೆಯ ಬಗ್ಗೆ ವಿವರಣೆ ನೀಡಿದರು. ವೇದಿಕೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ್ ರಾಠೋಡ ಸ್ವಾಗತಿಸಿದರೆ, ಶಿವಶರಣಪ್ಪ ವಂದಿಸಿದರು. ಕಾರ್ಯಕ್ರಮವನ್ನು ಶಿವಲೀಲಾ ಡೆಂಗಿ ನಿರೂಪಿಸಿದರು.
ವರದಿ: ವಿಶೇಷ ಪ್ರತಿನಿಧಿ, ಕರ್ನಾಟಕ ಕನ್ನಡ ಸಾಮ್ರಾಟ್, ಕಲಬುರಗಿ.



