ಚಿಂಚೋಳಿ: ತಾಲೂಕು ಆಡಳಿತ ಸೌಧದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ನೇತೃತ್ವದಲ್ಲಿ ಸಡಗರದ 79ನೇ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಹಾಗೂ ವಿಶ್ವಕರ್ಮ ಜಯಂತಿ
ಚಿಂಚೋಳಿ (ವಿಶೇಷ ವರದಿ – ಕನ್ನಡ ಸಾಮ್ರಾಟ್ ನ್ಯೂಸ್):
ಹೈದರಾಬಾದ್ ಕರ್ನಾಟಕ ವಿಮೋಚನೆಯ 79ನೇ ವರ್ಷಾಚರಣೆ ಅಂಗವಾಗಿ ಚಿಂಚೋಳಿ ತಾಲೂಕು ಆಡಳಿತ ಸೌಧದ ತಹಸೀಲ್ ಕಚೇರಿ ಆವರಣದಲ್ಲಿ ‘ಕಲ್ಯಾಣ ಕರ್ನಾಟಕ ಉತ್ಸವ’ ಹಾಗೂ ‘ವಿಶ್ವಕರ್ಮ ಜಯಂತಿ’ಯನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಈ ಭಾಗದ ಸ್ವಾತಂತ್ರ್ಯ ಮತ್ತು ಹಕ್ಕುಗಳಿಗಾಗಿ ರಕ್ತ ಬೆವರು ಸುರಿಸಿದ ಮಹನೀಯರನ್ನು ಸ್ಮರಿಸಿ ಮಾತನಾಡಿದರು.
ಹೋರಾಟದ ಇತಿಹಾಸ ಮತ್ತು ಹಕ್ಕುಗಳ ಸಾಕಾರ:
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, “ನಿಜಾಮರ ಆಳ್ವಿಕೆಯಲ್ಲಿ ಸಿಲುಕಿದ್ದ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳು ಭಾರತ ಒಕ್ಕೂಟ ವ್ಯವಸ್ಥೆಯಿಂದ ಹೊರಗುಳಿಯುವ ಆತಂಕದಲ್ಲಿದ್ದವು. ಸರ್ದಾರ್ ವಲ್ಲಭಭಾಯಿ ಪಟೇಲರ ದಿಟ್ಟ ನಿರ್ಧಾರ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಸಲಹೆಯಂತೆ ನಡೆದ ಪೊಲೀಸ್ ಕಾರ್ಯಾಚರಣೆ (ಆಪರೇಷನ್ ಪೋಲೋ) ನಿಜಾಮರ ದಬ್ಬಾಳಿಕೆಯನ್ನು ಅಂತ್ಯಗೊಳಿಸಿ, ನಮ್ಮ ನೆಲ ಭಾರತದ ಒಕ್ಕೂಟ ಸೇರಲು ಮುನ್ನುಡಿ ಬರೆಯಿತು,” ಎಂದು ಸ್ಮರಿಸಿದರು.
ಮುಂದುವರಿದು ಮಾತನಾಡಿದ ಅವರು, ಈ ಭಾಗದ ಶೈಕ್ಷಣಿಕ ಪ್ರಗತಿ ಹಾಗೂ ಯುವಜನರ ಉದ್ಯೋಗದ ಹಕ್ಕಿಗಾಗಿ ಮಾಜಿ ಸಚಿವ ದಿ. ವೈಜಿನಾಥ ಪಾಟೀಲರು ಕೈಗೊಂಡ ದಣಿವರಿಯದ ಹೋರಾಟ ಹಾಗೂ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಸತತ ಪರಿಶ್ರಮದಿಂದಲೇ ಸಂವಿಧಾನದ 371 (ಜೆ) ವಿಶೇಷ ಸ್ಥಾನಮಾನ ಸಾಧ್ಯವಾಯಿತು ಎಂದು ಒತ್ತಿ ಹೇಳಿದರು. ವೈಜಿನಾಥ ಪಾಟೀಲರ ಹೋರಾಟವಿಲ್ಲದಿದ್ದರೆ ನಮ್ಮ ಯುವಕರು ಮೀಸಲಾತಿಯಿಂದ ವಂಚಿತರಾಗಬೇಕಿತ್ತು ಎಂದರು.
ಸಂವಿಧಾನ ಸದ್ಬಳಕೆ ಮತ್ತು ಎಚ್ಚರಿಕೆಯ ಮಾತು:
371 (ಜೆ) ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಸ್ಥಳೀಯರು ಜಾಗೃತರಾಗಬೇಕಿದೆ. ಸೂಕ್ತ ಜಾಗೃತಿ ಕೊರತೆಯಿಂದಾಗಿ ಈ ವಿಶೇಷ ಸ್ಥಾನಮಾನದ ಲಾಭ ನೆರೆಯ ಜಿಲ್ಲೆಗಳ ಪಾಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ತಹಸೀಲ್ದಾರ್, ಯುವಜನತೆ ಶಿಕ್ಷಣ, ಸಂಶೋಧನೆ, ಉದ್ಯೋಗ ಹಾಗೂ ಸಾಮಾಜಿಕ ರಂಗಗಳಲ್ಲಿ ಮುಂಚೂಣಿಗೆ ಬರಬೇಕು ಎಂದು ಕರೆ ನೀಡಿದರು. ಜೊತೆಗೆ ಪಾಲಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವಂತೆ ಪ್ರೋತ್ಸಾಹಿಸಬೇಕು ಎಂದರು.
ಮಾಧ್ಯಮ ಮಿತ್ರರಿಗೆ ಗೌರವ ಸನ್ಮಾನ:
ಇದೇ ಶುಭ ಸಂದರ್ಭದಲ್ಲಿ, ಸಮಾಜದ ವಾಸ್ತವ ಸಂಗತಿಗಳನ್ನು ಹಾಗೂ ಜನಸಾಮಾನ್ಯರ ಧ್ವನಿಯನ್ನು ಬೆಳಕಿಗೆ ತರುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಚಿಂಚೋಳಿ ತಾಲೂಕಿನ ಡಿಜಿಟಲ್ ಹಾಗೂ ಮುದ್ರಣ ಮಾಧ್ಯಮದ (Digital & Print Media) ಪತ್ರಕರ್ತರನ್ನು ತಾಲೂಕು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರು ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ವಿಶೇಷ ಉಪನ್ಯಾಸ ಹಾಗೂ ಸಾಂಸ್ಕೃತಿಕ ಸಂಭ್ರಮ:
ಸಮಾರಂಭದಲ್ಲಿ ಶಿಕ್ಷಣ ಸಂಯೋಜಕ ಅಶೋಕ್ ಹೂವಿನಭಾವಿ ವಿಶೇಷ ಉಪನ್ಯಾಸ ನೀಡಿ ಐತಿಹಾಸಿಕ ಹೋರಾಟದ ಮಹತ್ವವನ್ನು ವಿವರಿಸಿದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಮನಸೂರೆಗೊಂಡವು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರೇಡ್-2 ತಹಸೀಲ್ದಾರ್ ಅಶೋಕ್ ಕುಲಕರ್ಣಿ, ಪುರಸಭೆ ಅಧಿಕಾರಿ ಕಾಶಿನಾಥ್ ಧನ್ನಿ, ತಾಲೂಕು ಆರೋಗ್ಯಾಧಿಕಾರಿ ಡಾ. ಲತೀಫ್, ಬಿಇಒ ಧೋಳಪ್ಪ ಮಳೆನೂರ, ಸಮಾಜ ಕಲ್ಯಾಣಾಧಿಕಾರಿ ಜ್ಯೋತಿ, ಪಶುಸಂಗೋಪನಾಧಿಕಾರಿ ಡಾ. ಮಲ್ಲಿಕಾರ್ಜುನ ಗುತ್ತೇದಾರ್, ಅಗ್ನಿಶಾಮಕ ಅಧಿಕಾರಿ ಎಸ್. ಕೆ. ಹಸನ್, ಮುಖಂಡರಾದ ಬಸವರಾಜ ಜಾಂಗಲೇರಾ, ಮಲ್ಲಿಕಾರ್ಜುನ ಪಲಮೂರ, ನಾಗಶೆಟ್ಟಿ ಭದ್ರಶೆಟ್ಟಿ, ಆರಿಫ್, ಮಹೇಶ್ ಪತ್ತಾರ, ನೀಲಕಂಠ ಸೀಳಿನ್, ಗೌತಮ್ ಬೊಮ್ಮನಹಳ್ಳಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.








