ಕನ್ನಡ ಸಾಮ್ರಾಟ್ ವಿಶೇಷ ವರದಿ
ಕಲಬುರಗಿ ಗ್ಯಾಸ್ ವಿತರಕರಿಗೆ ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್: ಕಾಳಸಂತೆಯಲ್ಲಿ ಸಿಲಿಂಡರ್ ಮಾರಿದ್ರೆ ಡಿಸ್ಟ್ರಿಬ್ಯೂಟರ್ಗಳೇ ಹೊಣೆ!
ಕಲಬುರಗಿ: ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ನೆಪವೊಡ್ಡಿ ಗ್ಯಾಸ್ ಸಿಲಿಂಡರ್ ಕೃತಕ ಅಭಾವ ಸೃಷ್ಟಿಸಿದರೆ ಅಥವಾ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದು ಕಂಡುಬಂದರೆ, ಗ್ಯಾಸ್ ಏಜೆನ್ಸಿ ಹಾಗೂ ಡಿಸ್ಟ್ರಿಬ್ಯೂಟರ್ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು ಎಂದು ಕಲಬುರಗಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಗುಡುಗಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಎಲ್.ಪಿ.ಜಿ (LPG) ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯುದ್ಧದ ಭೀತಿಯಿಂದಾಗಿ ಜನರಲ್ಲಿ ಗ್ಯಾಸ್ ಸಿಗುವುದಿಲ್ಲವೇನೋ ಎಂಬ ಆತಂಕ ಮನೆಮಾಡಿದೆ. ಈ ಸೂಕ್ಷ್ಮ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುವಂತಿಲ್ಲ ಎಂದು ಅವರು ಅಧಿಕಾರಿಗಳಿಗೆ ಹಾಗೂ ವಿತರಕರಿಗೆ ಎಚ್ಚರಿಕೆ ರವಾನಿಸಿದ್ದಾರೆ.
ಡಿಸಿ ಸಭೆಯ ಪ್ರಮುಖ ನಿರ್ದೇಶನಗಳು:
ಫಿಫೋ (FIFO) ನಿಯಮ ಕಡ್ಡಾಯ: ಗೃಹ ಬಳಕೆದಾರರಿಗೆ ‘ಮೊದಲು ನೊಂದಾಯಿಸಿದವರಿಗೆ ಮೊದಲು ವಿತರಣೆ’ (First In, First Out) ಆಧಾರದ ಮೇಲೆಯೇ ಸಿಲಿಂಡರ್ ಪೂರೈಸಬೇಕು.
ಹೋಟೆಲ್ಗಳ ಮೇಲೆ ಹದ್ದಿನ ಕಣ್ಣು: ಗೃಹ ಬಳಕೆ ಸಿಲಿಂಡರ್ಗಳನ್ನು (ಕೆಂಪು ಸಿಲಿಂಡರ್) ಯಾವುದೇ ಕಾರಣಕ್ಕೂ ಹೋಟೆಲ್ ಅಥವಾ ವಾಣಿಜ್ಯ ಉದ್ದೇಶಗಳಿಗೆ ಬಳಸುವಂತಿಲ್ಲ. ಅನಧಿಕೃತ ದಾಸ್ತಾನು ಅಥವಾ ರಿಫಿಲ್ಲಿಂಗ್ ದಂಧೆ ಕಂಡುಬಂದರೆ ‘ಅಗತ್ಯ ವಸ್ತುಗಳ ಕಾಯ್ದೆ’ಯಡಿ ಕಠಿಣ ಕೇಸ್ ದಾಖಲಿಸಲಾಗುವುದು.
ಹೆಚ್.ಪಿ.ಸಿ.ಎಲ್ (HPCL) ಕಂಪನಿಗೆ ತರಾಟೆ: ಐ.ಒ.ಸಿ.ಎಲ್ ಮತ್ತು ಬಿ.ಪಿ.ಸಿ.ಎಲ್ ಕಂಪನಿಗಳು ನಗರದ ಗ್ರಾಹಕರಿಗೆ 25 ದಿನಗಳ ಅಂತರದಲ್ಲಿ ಸಿಲಿಂಡರ್ ನೀಡುತ್ತಿದ್ದರೆ, ನೀವು ಮಾತ್ರ 45 ದಿನಗಳ ಮಿತಿ ಹೇರಿ ಗ್ರಾಹಕರಿಗೆ ಏಕೆ ತೊಂದರೆ ನೀಡುತ್ತಿದ್ದೀರಿ? ನಿಮ್ಮ ಹಂತದಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳುವಂತಿಲ್ಲ, ಕೂಡಲೇ ಇದನ್ನು 25 ದಿನಕ್ಕೆ ಇಳಿಸಿ ಎಂದು ಹೆಚ್.ಪಿ.ಸಿ.ಎಲ್ ಪ್ರತಿನಿಧಿ ಪೃಥ್ವಿ ಅವರಿಗೆ ಡಿಸಿ ಖಡಕ್ ಸೂಚನೆ ನೀಡಿದರು.
ಆದ್ಯತಾ ಪೂರೈಕೆ: ಆಸ್ಪತ್ರೆಗಳು, ಶಾಲೆ, ಹಾಸ್ಟೆಲ್ ಹಾಗೂ ಕ್ಯಾಂಟೀನ್ಗಳಿಗೆ ಗ್ಯಾಸ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಎಚ್ಚರವಹಿಸಬೇಕು.
ಸಹಾಯವಾಣಿ ಆರಂಭಿಸಿ: ಜನರಲ್ಲಿರುವ ಗೊಂದಲ ನಿವಾರಿಸಲು ಹಾಗೂ ಗ್ರಾಹಕರ ಸಮಸ್ಯೆಗಳಿಗೆ ಕಿವಿಯಾಗಲು ಕೂಡಲೇ ಸಹಾಯವಾಣಿ (Helpline) ಆರಂಭಿಸುವಂತೆ ಆಹಾರ ಇಲಾಖೆಗೆ ನಿರ್ದೇಶನ ನೀಡಲಾಯಿತು.
ಇಂಧನ ವಿತರಣೆ ನಿಯಮ: ವಾಹನಗಳಿಗೆ ನಿಗದಿತ ಪ್ರಮಾಣದಲ್ಲೇ ಪೆಟ್ರೋಲ್-ಡೀಸೆಲ್ ಪೂರೈಸಬೇಕು. ಬೃಹತ್ ಬಳಕೆದಾರರು (Bulk users) ನೇರವಾಗಿ ಡಿಪೋಗಳಿಂದಲೇ ಇಂಧನ ಪಡೆಯಬೇಕು.
ಸಾರ್ವಜನಿಕರಿಗೆ ಜಿಲ್ಲಾಡಳಿತದ ಅಭಯ: ಆತಂಕ ಬೇಡ, ಸಾಕಷ್ಟು ದಾಸ್ತಾನಿದೆ!
ಮಧ್ಯಪ್ರಾಚ್ಯದ ಬೆಳವಣಿಗೆಗಳ ಬಗ್ಗೆ ಜನತೆ ಆತಂಕಪಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಗ್ಯಾಸ್ ಸಿಲಿಂಡರ್ಗಳ ಯಾವುದೇ ಕೊರತೆಯಿಲ್ಲ. ಪ್ರತಿನಿತ್ಯದ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಂಪನಿಗಳು ಸಿಲಿಂಡರ್ಗಳನ್ನು ಪೂರೈಸುತ್ತಿವೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಬುಕ್ಕಿಂಗ್ ನಿಯಮ: ನಗರ ಪ್ರದೇಶದ ಗ್ರಾಹಕರು ಹಿಂದಿನ ಡೆಲಿವರಿಯಾದ 25 ದಿನಗಳ ನಂತರ ಹಾಗೂ ಗ್ರಾಮೀಣ ಮತ್ತು ಪಿ.ಎಂ. ಉಜ್ವಲ ಯೋಜನೆಯ ಗ್ರಾಹಕರು 45 ದಿನಗಳ ನಂತರ ಸಿಲಿಂಡರ್ ಬುಕ್ ಮಾಡಬಹುದಾಗಿದೆ.
ಕಲಬುರಗಿ ಜಿಲ್ಲೆಯ ಎಲ್.ಪಿ.ಜಿ ಸಂಪರ್ಕ ಹಾಗೂ ದಾಸ್ತಾನು ವಿವರ:
ವಿವರಣೆ ಅಂಕಿ-ಅಂಶಗಳು
ಒಟ್ಟು ಗ್ಯಾಸ್ ವಿತರಕರು (Dealers) 47
ಸಿಂಗಲ್ ಸಿಲಿಂಡರ್ ಬಳಕೆದಾರರು 3,29,674
ಡಬಲ್ ಸಿಲಿಂಡರ್ ಬಳಕೆದಾರರು 2,32,294
ವಾಣಿಜ್ಯ ಸಿಲಿಂಡರ್ ಬಳಕೆದಾರರು 10,372
ಪಿ.ಎಂ. ಉಜ್ವಲ ಯೋಜನೆ ಫಲಾನುಭವಿಗಳು 2,68,399
ಪ್ರಸ್ತುತ ಗೃಹ ಬಳಕೆ ಸಿಲಿಂಡರ್ ದಾಸ್ತಾನು 19,158
ಪ್ರಸ್ತುತ ವಾಣಿಜ್ಯ ಸಿಲಿಂಡರ್ ದಾಸ್ತಾನು 1,761
(ಮಾಹಿತಿ: ಮುನಾವರ್ ದೌಲಾ, ಪ್ರಭಾರಿ ಉಪನಿರ್ದೇಶಕರು, ಆಹಾರ ಇಲಾಖೆ)
ಸಾಗಾಣಿಕೆ ವೆಚ್ಚ ಹೆಚ್ಚಳಕ್ಕೆ ವಿತರಕರ ಅಳಲು:
ಬೆಲೆ ಏರಿಕೆ ಬಿಸಿ ಕೇವಲ ಜನಸಾಮಾನ್ಯರಿಗಲ್ಲ, ವಿತರಕರಿಗೂ ತಟ್ಟಿದ್ದು, ಸಭೆಯಲ್ಲಿ ತಮ್ಮ ಸಮಸ್ಯೆ ತೋಡಿಕೊಂಡರು. “2002-03ನೇ ಸಾಲಿನಲ್ಲಿ ಅಕ್ಷರ ದಾಸೋಹ ಯೋಜನೆಗೆ ಶಾಲೆಗಳಿಗೆ ಸಿಲಿಂಡರ್ ಪೂರೈಸಲು ಪ್ರತಿ ಕಿ.ಮೀ.ಗೆ ಕೇವಲ ₹1.60 ಸಾರಿಗೆ ವೆಚ್ಚ ನಿಗದಿಪಡಿಸಲಾಗಿತ್ತು. ಅಂದು ಲೀಟರ್ ಡೀಸೆಲ್ ಬೆಲೆ ಕೇವಲ ₹30 ಇತ್ತು, ಇಂದು ಅದು ₹90 ದಾಟಿದೆ. ಇದು ನಮಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದ್ದು, ಸಾರಿಗೆ ವೆಚ್ಚವನ್ನು ಪ್ರತಿ ಕಿ.ಮೀ.ಗೆ ₹3 ಕ್ಕೆ ಹೆಚ್ಚಿಸಬೇಕು” ಎಂದು ಮನವಿ ಮಾಡಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿ.ಇ.ಓ ಹಾಗೂ ತಾಲೂಕಾ ಪಂಚಾಯತ್ ಇ.ಓ ಅವರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
ಸಭೆಯಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ರಫೀಕ್ ಲಾಡಜಿ, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಅಲ್ಲಾಭಕ್ಷ, ಪೆಟ್ರೋಲ್ ಪಂಪ್ ಸಂಘದ ಉಪಾಧ್ಯಕ್ಷ ರಾಮಚಂದ್ರ ಕೋಸಗಿ, ಹಾಗೂ ಐ.ಒ.ಸಿ.ಎಲ್, ಹೆಚ್.ಪಿ.ಸಿ.ಎಲ್, ಬಿ.ಪಿ.ಸಿ.ಎಲ್, ಮತ್ತು ನಯರಾ ತೈಲ ಕಂಪನಿಗಳ ಅಧಿಕಾರಿಗಳು ಹಾಗೂ ಡೀಲರ್ಗಳು ಉಪಸ್ಥಿತರಿದ್ದರು.







