ಕಲಬುರಗಿಯಲ್ಲಿ ‘ಬುದ್ಧ-ಬಸವ-ಅಂಬೇಡ್ಕರ್ ರತ್ನ ಪ್ರಶಸ್ತಿ’ ಪ್ರದಾನ: ಸಮಾಜ ಸೇವಕರಿಗೆ ಗೌರವ, ಯುವಕರಿಗೆ ಪ್ರೇರಣೆಯ ಸಂದೇಶ
ಕಲಬುರಗಿ: ಮಹಾತ್ಮ ಗೌತಮ ಬುದ್ಧ, ವಿಶ್ವಗುರು ಬಸವಣ್ಣ ಹಾಗೂ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಇಂದಿನ ಸಮಾಜಕ್ಕೆ ದಿಕ್ಕು ತೋರಿಸುವ ಶಕ್ತಿಯಾಗಿವೆ. ಯುವ ಪೀಳಿಗೆ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿ ಬದುಕು ನಡೆಸಬೇಕು ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಡಾ. ಅಲ್ಲಮಪ್ರಭು ಪಾಟೀಲ ಹೇಳಿದರು.
ನಗರದ ಕನ್ನಡ ಭವನದಲ್ಲಿ ಜೈ ಕನ್ನಡಿಗರ ರಕ್ಷಣಾ ವೇದಿಕೆ ರಾಜ್ಯ ಘಟಕ ಮತ್ತು ಸನ್ರೈಸ್ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ “ಬುದ್ಧ-ಬಸವ-ಅಂಬೇಡ್ಕರ್ ರತ್ನ ಪ್ರಶಸ್ತಿ” ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಸೌಹಾರ್ದತೆ, ಮಾನವೀಯತೆ ಹಾಗೂ ಸಾಮಾಜಿಕ ಜಾಗೃತಿ ಹೆಚ್ಚಿಸಲು ನೆರವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸನ್ರೈಸ್ ಆಸ್ಪತ್ರೆಯ ಮುಖ್ಯಸ್ಥ ಡಾ. ಸಲ್ಮಾನ್ ವಹಿಸಿದ್ದರು. ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಚಿನ್ ಫರತಹಾಬಾದ್ ಕಾರ್ಯಕ್ರಮದ ನೇತೃತ್ವ ವಹಿಸಿದರು.
ವೇದಿಕೆಯಲ್ಲಿ ಕೆಪಿಸಿಸಿ ಸದಸ್ಯ ನೀಲಕಂಠರಾವ್ ಮೂಲಗೆ, ಐದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಂಯೋಜಕ ವಿಜಯಕುಮಾರ ಕಟ್ಟಿಮನಿ, ಮಾಜಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ್ ಬಡಿಗೇರ, ಕಾಂಗ್ರೆಸ್ ಯುವ ಮುಖಂಡರಾದ ಮಲ್ಲಿಕಾರ್ಜುನ ನೀಲೂರ, ಕುಮಾರ ದೊಡ್ಡಮನಿ, ರಾಜಕುಮಾರ ಪಾಟೀಲ ಹಾಗೂ ಸುರೇಶ್ ಹನಗುಂಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಸಮಾಜ ಸೇವಕರಾದ ಗಿರೀಶ ಬೋರೆ, ಗೋಪಾಲ ಫಾಸ್ಟರ್, ಪತ್ರಕರ್ತ ರಾಜು ದೇಶಮುಖ, ಡಿಎಸ್ಎಸ್ ಜಿಲ್ಲಾ ಅಧ್ಯಕ್ಷ ಸುರೇಶ್ ಹಾದಿಮನಿ, ಸಮಾಜ ಸೇವಕ ಶಿವಕುಮಾರ ದೊಡ್ಡಮನಿ, ಯುವ ಮುಖಂಡ ಶ್ರೀಕಾಂತ ವಂಟಿ ಹಾಗೂ ಕರ್ನಾಟಕ ಡೋರ್ ಮತ್ತು ಕಕ್ಕಯ್ಯ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ನರೇಶಕುಮಾರ ಎಸ್. ಕಟಕೆ ಅವರಿಗೆ “ಬುದ್ಧ-ಬಸವ-ಅಂಬೇಡ್ಕರ್ ರತ್ನ ಪ್ರಶಸ್ತಿ” ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜೈಭೀಮ್ ಸಾವಳಗಿ ಸ್ವಾಗತಿಸಿದರು. ಮಕ್ಕಳಿಂದ ಭರತನಾಟ್ಯ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ವಿವಿಧ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಸಾಹಿತ್ಯ ಕ್ಷೇತ್ರದ ಮುಖಂಡರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ವರದಿ: ಕನ್ನಡ ಸಮ್ರಾಟ್ ಡಿಜಿಟಲ್ ಡೆಸ್ಕ್
www.KannadaSamrat.com






