*ವಿಷಯ ಗಂಭೀರ, ನಿರೂಪಣೆ ಹಾಸ್ಯ – ಡಾ. ಸಂಗಮೇಶ ಉಪಾಸೆ*
ಕಿರುತೆರೆಯ ’ಸಿಲ್ಲಿ ಲಲ್ಲಿ’ ಧಾರವಾಹಿಯಲ್ಲಿ ’ಅರ್ಥವಾಯಿತು ಬಿಡಿ’ ಎಂದು ನಗಿಸುತ್ತಿದ್ದ ಡಾ. ಸಂಗಮೇಶ ಉಪಾಸೆ ಸಾಕಷ್ಟು ಚಿತ್ರಗಳಲ್ಲಿ ಕಾಮಿಡಿ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಇದೆಲ್ಲದರ ಅನುಭವದಿಂದ ಹೊಸ ಪ್ರಯತ್ನ ಎನ್ನುವಂತೆ ಈಗ ’ಗಲಿಬಿಲಿ ಗೋವಿಂದ’ ಚಿತ್ರದ ಮುಖಾಂತರ ನಿರ್ದೇಶನ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಳೆದ ವಾರವಷ್ಟೇ ಚಡಚಣ ಸಮೀಪ ಇರುವ ಇಂಚಗೇರಿ ಮಠದ ಆವರಣದಲ್ಲಿ ಮುಹೂರ್ತ ಯಶಸ್ವಿಯಾಗಿ ನಡೆದಿದೆ. ’ನಗುವವರಿಗೆ ಮಾತ್ರ’ ಎಂಬ ಪಂಚಿಂಗ್ ಅಡಿ ಬರಹ ವಿಶೇಷವಾಗಿದೆ.
ಸಿನಿಮಾ ಕುರಿತಂತೆ ಮಾತನಾಡಿರುವ ಸಿನಿಮಾ ನಿರ್ದೇಶಕ ಡಾ. ಸಂಗಮೇಶ ಉಪಾಸೆ “ಇದೊಂದು ಮಕ್ಕಳು ಇದ್ದವರು ಮತ್ತು ಮಕ್ಕಳು ಇಲ್ಲದವರ ಸಮಸ್ಯೆಗಳ ಸುತ್ತ ಹೆಣೆದ ಕತೆಯಾಗಿದ್ದು, ಪ್ರಸ್ತುತ ಸಮಾಜದಲ್ಲಿರುವ ವಾಸ್ತವ ಸಮಸ್ಯೆಗಳ ಮೇಲೆ ಬೆಳಕು ಚಲ್ಲಲಿದ್ದು, ಸಿನಿಮಾ ನಿರೂಪಣೆ ಹಾಸ್ಯದ ಧಾಟಿಯಲ್ಲಿದೆ. ಮಕ್ಕಳಿಲ್ಲದ ಶ್ರೀಮಂತರು ಮತ್ತು ಹಣ ಉಳ್ಳವರು ಆ ಯು ಆಯ್ , ಆ ಯು ಎಫ್, ಪ್ರಣಾಳ ಶಿಸು, ಬಾಡಿಗೆ ತಾಯಿ ಮುಖಾಂತರ ಮಕ್ಕಳನ್ನು ಪಡೆದರೆ, ಮಕ್ಕಳಿಲ್ಲದ ಹಣವಿಲ್ಲದವರು ಮಕ್ಕಳ ಪಡೆಯಲು ಏನೆಲ್ಲ ಮಾಡುತ್ತಾರೆ ಎನ್ನುವುದು ಈ ಚಿತ್ರದ ಮೂಲಕ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ. ಇದೊಂದು ವೈಚಾರಿಕ, ವೈಜ್ಞಾನಿಕ ಮತ್ತು ಧಾರ್ಮಿಕ ನಂಬಿಕೆಗಳ ಮುಖಾಮುಖಿಯ ಕಥನವಾಗಲಿದೆ. ನಾನು ಗ್ರಾಮೀಣ ಭಾಗದಲ್ಲಿ ಬಂದವನಾಗಿದ್ದರಿಂದ ಅಲ್ಲಿನ ಘಟನೆಗಳನ್ನು ಕಣ್ಣಾರೆ ಕಂಡಿದ್ದೇನೆ. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ನೈಜ ಅಂಶಗಳು ಮತ್ತು ವೈಚಾರಿಕ, ವೈಜ್ಞಾನಿಕ, ಧಾರ್ಮಿಕ ಮುಖಾಮುಖಿ ಸಂಘರ್ಷಗಳು ಈ ಚಿತ್ರದಲ್ಲಿ ನಡೆಯಲಿವೆ. ವಿಷಯ ಗಂಭೀರವಾಗಿದ್ದರೂ, ಪೂರ್ತಿ ಚಿತ್ರ ಹಾಸ್ಯದಲ್ಲಿ ಸಾಗುತ್ತಾ, ನೋಡುಗರಿಗೆ ಮನರಂಜನೆ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಕ್ಲೈಮಾಕ್ಸ್‌ನ್ನು ಅರ್ಥಪೂರ್ಣ ಸಂದೇಶದೊಂದಿಗೆ ಹೇಳಲಾಗಿದೆ” ಎನ್ನುತ್ತಾರೆ.
ಇಬ್ಬರು ನಾಯಕಿಯರ ತಲಾಷ್ ನಡೆಯುತ್ತಿದೆ. ಉತ್ತರ ಕರ್ನಾಟಕ ಭಾಗದ ಕಥೆಯಾಗಿರುವುದರಿಂದ ಅಲ್ಲಿನ ಭಾಷೆ, ವೇಶ-ಭೂಷಣ, ಹಾಸ್ಯ ಪ್ರಜ್ಞೆ ಮತ್ತು ಮಾತಿನ ಧಾಟಿ ತಿಳಿದಂತ ನಟಿಗೆ ಆದ್ಯತೆ ಕೊಡಲಾಗುವುದು. ಈಗಾಗಲೇ ಮೂರು ಹಾಡು ಮತ್ತು ಶೇಕಡ ಹತ್ತರಷ್ಟು ಮಾತಿನ ಭಾಗದ ಶೂಟಿಂಗ್ ಮುಗಿಸಲಾಗಿದೆ. ಬಾಕಿ ಮೂರು ಹಾಡುಗಳು ಹಾಗೂ ಉಳಿದಂತೆ ಚಿತ್ರೀಕರಣವನ್ನು ಹೋರ್ತಿ, ಅಂಜುಟಗಿ, ಬಳ್ಳೊಳ್ಳಿ, ಹಳಗುಣಕಿ, ಸಾವಳಸಂಗ, ವಿಜಯಪುರ ಮುಂತಾದ ಕಡೆಗಳಲ್ಲಿ ದೃಶ್ಯಗಳನ್ನು ಸೆರೆ ಹಿಡಿಯಲು ಯೋಜನೆ ಹಾಕಲಾಗಿದೆ. ಹಿರಿಯ ಪೋಷಕ ಕಲಾವಿದರ ಜತೆಗೆ ಅಲ್ಲಿನ ರಂಗಭೂಮಿ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ ಅಂತ ಡಾ.ಸಂಗಮೇಶ ಉಪಾಸೆ ಮಾಹಿತಿ ಹಂಚಿಕೊಂಡಿದ್ದಾರೆ.
ಬಿಜಾಪುರ ಮೂಲದ ಸಮಾನ ಮನಸ್ಕರುಗಳಾದ ಅಂಬರೀಷ ಬಣಜಿಗೇರ, ಸಂದೀಪ್ ರಾಠೋಡ್, ಚಿದಾನಂದ ಪರಗೊಂಡ, ಮಡಿವಾಳಪ್ಪ.ಎಮ್.ಗೋಗಿ ಮತ್ತು ಚಿದಾನಂದ ಪತ್ತಾರ ಜಂಟಿಯಾಗಿ ಬಂಡವಾಳ ಹೂಡುತಿದ್ದಾರೆ.
ಸಂಗೀತ ಪಳನಿ.ಡಿ.ಸೇನಾಪತಿ, ಛಾಯಾಗ್ರಹಣ ಆನಂದ ದಿಂಡ್ವರ್, ಸಂಕಲನ ರವಿತೇಜ್.ಸಿ.ಹೆಚ್, ನೃತ್ಯ ಮಾಲೂರು ಶ್ರೀನಿವಾಸ್ ಅವರದಾಗಿದೆ.





