Home » ಕಲಬುರಗಿ » ಆಳಂದ » ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿದ ಮಾದನ ಹಿಪ್ಪರಗಿ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿದ ಮಾದನ ಹಿಪ್ಪರಗಿ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ

ಕನ್ನಡ ಸಾಮ್ರಾಟ್ ಡಿಜಿಟಲ್ ಡೆಸ್ಕ್

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿದ ಮಾದನ ಹಿಪ್ಪರಗಿ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ

ಮಾದನ ಹಿಪ್ಪರಗಿ (ಆಳಂದ): ಗಡಿಭಾಗದ ಭಕ್ತರ ಆರಾಧ್ಯ ದೈವ, ಆಳಂದ ತಾಲೂಕಿನ ಮಾದನ ಹಿಪ್ಪರಗಿಯ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ಮಹಾರಥೋತ್ಸವವು ಶುಕ್ರವಾರ ರಾತ್ರಿ ಸಹಸ್ರಾರು ಭಕ್ತರ ಹರ್ಷೋದ್ಗಾರ, ಭಕ್ತಿ-ಭಾವಗಳ ನಡುವೆ ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿತು.
​ಕರ್ನಾಟಕ ಹಾಗೂ ನೆರೆಯ ಮಹಾರಾಷ್ಟ್ರದ ನಾನಾ ಮೂಲೆಗಳಿಂದ ಹರಿದುಬಂದಿದ್ದ ಲಕ್ಷಾಂತರ ಭಕ್ತಸಾಗರ ಈ ಕಣ್ಮನ ಸೆಳೆಯುವ ಭಕ್ತಿ ಸಾಗರಕ್ಕೆ ಸಾಕ್ಷಿಯಾಯಿತು.
​ಝಗಮಗಿಸಿದ ರಥ, ಮೊಳಗಿದ ಜಯಘೋಷ
​ವಿದ್ಯುತ್ ದೀಪಾಲಂಕಾರಗಳಿಂದ ನವ ವಧುವಿನಂತೆ ಕಂಗೊಳಿಸುತ್ತಿದ್ದ ಮಹಾರಥವನ್ನು ನೋಡಲು ಎರಡು ಕಣ್ಣುಗಳು ಸಾಲದಾಗಿದ್ದವು. ರಥೋತ್ಸವಕ್ಕೂ ಮುನ್ನ ಮಠದ ಪೀಠಾಧಿಪತಿಗಳಾದ ಅಭಿನವ ಶಿವಲಿಂಗ ಸ್ವಾಮೀಜಿಯವರು ಪಲ್ಲಕ್ಕಿಯಲ್ಲಿ ಆಗಮಿಸಿ, ರಥಕ್ಕೆ ಪ್ರದಕ್ಷಿಣೆ ಹಾಕಿ, ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
​ಪುರವಂತರ ಒಡಪು ಹಾಗೂ ಕುಣಿತ ಜಾತ್ರೆಯ ರಂಗನ್ನು ಮತ್ತಷ್ಟು ಹೆಚ್ಚಿಸಿದವು. ಉತ್ಸಾಹದಿಂದ ರಥವೆಳೆದ ಯುವಕರು, “ಶಿವಲಿಂಗೇಶ್ವರ ಮಹಾರಾಜ್ ಕೀ ಜೈ…”, “ಅಭಿನವ ಶಿವಲಿಂಗ ಸ್ವಾಮೀಜಿ ಕೀ ಜೈ…” ಎಂದು ಹಾಕಿದ ಗಗನಭೇದಿ ಘೋಷಣೆಗಳು ಭಕ್ತಿಪರವಶತೆಯ ಪರಾಕಾಷ್ಠೆಯನ್ನು ತಲುಪಿದ್ದವು. ರಥ ಸಾಗುವ ಹಾದಿಯುದ್ದಕ್ಕೂ ಭಕ್ತರು ಬಾಳೆಹಣ್ಣು, ಉತ್ತತ್ತಿ ಹಾಗೂ ಪುಷ್ಪವೃಷ್ಟಿ ಸುರಿಸಿ ತಮ್ಮ ಹರಕೆ ತೀರಿಸಿದರು. ಉಪವಾಸ ವ್ರತ ಕೈಗೊಂಡಿದ್ದ ನೂರಾರು ಭಕ್ತರು ಭಕ್ತಿಯಿಂದ ರಥವನ್ನೆಳೆದು ಪುನೀತರಾದರು.
ನಂಬಿಕೆಯಿಂದ ದುಡಿದವರಿಗೆ ಫಲ ಖಚಿತ: ಸ್ವಾಮೀಜಿ ಅಭಯ
​ರಥೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀ ಮಠದ ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮೀಜಿ, “ಶ್ರದ್ಧೆ ಮತ್ತು ನಂಬಿಕೆಯಿಂದ ದುಡಿಯುವ ಭಕ್ತರಿಗೆ ದೇವರು ತಕ್ಕ ಫಲವನ್ನು ಕಟ್ಟಿಟ್ಟ ಬುತ್ತಿಯಾಗಿ ನೀಡುತ್ತಾನೆ” ಎಂದು ಅಭಯ ನೀಡಿದರು.
​”ಹಿರಿಯರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ. ಶ್ರೀಮಠವು ಕೇವಲ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಸೇವೆಗೆ ಮಾತ್ರ ಸೀಮಿತವಾಗದೆ; ಕೃಷಿ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯಂತಹ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ” ಎಂದು ತಿಳಿಸಿದರು.
​ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಹಾವೇರಿ-ಹುಕ್ಕೇರಿ ಮಠದ ಡಾ. ಸದಾಶಿವ ಸ್ವಾಮೀಜಿ ಮಾತನಾಡಿ, “ಅಭಿನವ ಶಿವಲಿಂಗ ಸ್ವಾಮೀಜಿಯವರು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಮಠದ ಕೀರ್ತಿಯನ್ನು ನಾಡಿನೆಲ್ಲೆಡೆ ಪಸರಿಸುವ ಮೂಲಕ ಭಕ್ತರ ಮನ ಗೆದ್ದಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
​ಸಾಸಿರ ನಾಡಿನ ಸಾಧಕ ಪ್ರಶಸ್ತಿ ಪ್ರದಾನ
​ಇದೇ ಶುಭ ಸಂದರ್ಭದಲ್ಲಿ, ಸಮಾಜಕ್ಕೆ ಗಣನೀಯ ಸೇವೆ ಸಲ್ಲಿಸಿದ ಹಲ್ಯಾಲಗರದ ಕ್ಯಾಡ್‌ಮ್ಯಾಕ್ ಸಂಸ್ಥಾಪಕ ಅರುಣಕುಮಾರ ಪಾಟೀಲ ಅವರಿಗೆ ಶ್ರೀಮಠದ ವತಿಯಿಂದ ಪ್ರತಿಷ್ಠಿತ ‘ಸಾಸಿರ ನಾಡಿನ ಸಾಧಕ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
​ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಆರ್. ಪಾಟೀಲ ಮಾತನಾಡಿ, “ಶಿವಲಿಂಗೇಶ್ವರ ಮಠವು ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದಲ್ಲಿ ವಿಶಿಷ್ಟವಾದ ಸ್ಥಾನಮಾನ ಹೊಂದಿದೆ. ಮಠದ ಸಾಮಾಜಿಕ ಕಾರ್ಯಗಳು ಭಕ್ತರ ಬಾಳಿಗೆ ಬೆಳಕಾಗಿವೆ” ಎಂದು ಶ್ಲಾಘಿಸಿದರು.
ಗಣ್ಯರ ಉಪಸ್ಥಿತಿ ಹಾಗೂ ಅಚ್ಚುಕಟ್ಟಾದ ವ್ಯವಸ್ಥೆ
​ವೇದಿಕೆಯ ಮೇಲೆ ಮುಂಡರಗಿ, ಅಕ್ಕಲಕೋಟೆ, ಬೈಲಹೊಂಗಲ, ನಂದಗಾವನ ಸೇರಿದಂತೆ ನಾಡಿನ ವಿವಿಧ ಮಠಮಾನ್ಯಗಳ ಪೀಠಾಧಿಪತಿಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ. ಪಾಟೀಲ, ಕಲಬುರಗಿ-ಬೀದರ-ಯಾದಗಿರ ಹಾಲು ಒಕ್ಕೂಟದ ಅಧ್ಯಕ್ಷ ಶಿವಕಾಂತಪ್ಪ ಪಾಟೀಲ, ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು.
​ಜಾತ್ರೆಗೆ ಆಗಮಿಸಿದ್ದ ಲಕ್ಷಾಂತರ ಭಕ್ತರಿಗೆ ಅಚ್ಚುಕಟ್ಟಾದ ಮಹಾದಾಸೋಹದ (ಪ್ರಸಾದ) ವ್ಯವಸ್ಥೆ ಮಾಡಲಾಗಿತ್ತು. ಪಿಎಸ್‌ಐ ಮಹಾಂತೇಶ ಪಾಟೀಲ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಕಮಿಟಿಯವರು, ಸ್ವಯಂಸೇವಕರು ನೂಕುನುಗ್ಗಲು ಆಗದಂತೆ ಸುಗಮ ಬಂದೋಬಸ್ತ್ ನಿರ್ವಹಿಸಿದರು

AI image

Share This

Facebook
X
WhatsApp
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments

ಇತ್ತೀಚಿನ ಸುದ್ದಿಗಳು