Home » ನ್ಯೂಸ್ » ರಾಜ್ಯ » *ರಾಷ್ಟ್ರಕೂಟರ ನಾಡಿನಲ್ಲಿ 688 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ*

*ರಾಷ್ಟ್ರಕೂಟರ ನಾಡಿನಲ್ಲಿ 688 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ*

*ರಾಷ್ಟ್ರಕೂಟರ ನಾಡಿನಲ್ಲಿ 688 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ*

*ನುಡಿದಂತೆ ನಡೆಯುವ ಸರ್ಕಾರ‌ ನಮ್ಮದು,ಇದೂವರೆಗೆ 243 ಭರವಸೆ ಈಡೇರಿಸಿದ್ದೇವೆ* -ಸಿದ್ದರಾಮಯ್ಯ*

ಕಲಬುರಗಿ,ಜ.12: ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆ ಸಮರ್ಪಕ ಅನುಷ್ಠಾನ ಮಾಡುವುದರ ಜೊತೆಗೆ 592 ಭರವಸೆಗಳ ಪೈಕಿ 243 ಭರವಸೆ ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿರುವುದು ಬಡವರ ಸರ್ಕಾರ. ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಸೋಮವಾರ ಸೇಡಂ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕಲ್ಯಾಣ‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇಡಂ ಮತಕ್ಷೇತ್ರಕ್ಕೆ‌ ಸಂಬಂಧಿಸಿದ ವಿವಿಧ ಇಲಾಖೆಯ ಸುಮಾರು 579.68 ಕೋಟಿ ರೂ. ವೆಚ್ಚದ 292 ಯೋಜನೆಗಳಿಗೆ ಅಡಿಗಲ್ಲು ಹಾಗೂ 108.35 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಕೈಗೆತ್ತಿಕೊಂಡು ಪೂರ್ಣಗೊಂಡ 75 ಅಭಿವೃದ್ದಿ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಕಳೆದ ಎರಡೂವರೆ ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗೆ 1.12 ಲಕ್ಷ ಕೋಟಿ ರೂ. ಹಣ ಖರ್ಚು ಮಾಡಿದ್ದೇವೆ. ಆರಂಭದಲ್ಲಿ ಇಂತಹ ಯೋಜನೆಗಳನ್ನು ವಿರೋಧಿಸಿದ ವಿರೋಧ ಪಕ್ಷದವರು, ಜಾರಿ ಮಾಡಿದರೆ ದಿವಾಳಿಯಾಗುತ್ತೆ ಎಂದಿದ್ದರು. ರಾಜ್ಯ ದಿವಾಳಿಯಾಗಿದ್ದರೆ ಇಂದಿಲ್ಲಿ 688 ಕೋಟಿ ರೂ. ಕೆಲಸ‌ಕ್ಕೆ ಅನುದಾನ ಇರುತ್ತಿತ್ತಾ ಎಂದು ಪ್ರಶ್ನಿಸಿದ ಅವರು, ಸೇಡಂ ತಾಲೂಕಿನ ಬರ ಪೀಡಿತ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು 85.50 ಕೋಟಿ ರೂ. ವೆಚ್ಚದ ಕಾಚೂರ, 90 ಕೋಟಿ ರೂ. ವೆಚ್ಚದ ಬೀರನಳ್ಳಿ, 67.3 ಕೋಟಿ ರೂ. ವೆಚ್ಚದ ಯಡ್ಡಳ್ಳಿ, 82.90 ಕೋಟಿ ರೂ. ವೆಚ್ಚದ ತೆರನಹಳ್ಳಿ ಏತ‌ ನೀರಾವರಿ ಯೋಜನೆಗೆ ಇಂದಿಲ್ಲಿ ಅಡಿಗಲ್ಲು ಹಾಕಲಾಗಿದೆ. ಇದರಿಂದ ಸೇಡಂ ಭಾಗದ ಸಾವಿರಾರು ಎಕರೆ ಕೃಷಿಗೆ ನೀರು ಸಿಗಲಿದ್ದು, ಅಂತರ್ಜಲ ಹೆಚ್ಚಳವಾಗಲಿದೆ ಎಂದರು.

ಇದಷ್ಟೆ ಅಲ್ಲ ಸೇಡಂ ತಾಲೂಕಿನಲ್ಲಿ 78 ಕೋಟಿ ರೂ. ವೆಚ್ಚದಲ್ಲಿ ಜಿ.ಟಿ.ಟಿ.ಸಿ ಕೇಂದ್ರ ಅರಂಭಿಸಲಾಗುತ್ತದೆ. ಇದರಿಂದ ಕೌಲಶ್ಯ ಶಿಕ್ಷಣ ಸಿಗಲಿದೆ. ಇಲ್ಲಿ ತರಬೇತಿ ಪಡೆದವರಿಗೆ ಶೇ.100 ರಷ್ಟು ಉದ್ಯೋಗ ಖಾತ್ರಿ. ಇಂತಹ ಸಂಸ್ಥೆ ಈ ಭಾಗದಲ್ಲಿ ತೆರಯಲಾಗಿದೆ.‌ ನಮ್ಮ‌ ಸರ್ಕಾರದ ಎರಡೂವರೆ ವರ್ಷದಲ್ಲಿ ಇಂತಹ‌ 10 ಜಿ.ಟಿ.ಟಿ.ಸಿ ಆರಂಭಿಸಿದ್ದು, ಮುಂದೆಯೂ ಎಲ್ಲೆಡೆ ಸ್ಥಾಪಿಸಲಾಗುತ್ತದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ‌ಮೆಡಿಕಲ್‌ ಕಾಲೇಜು ಟ್ರಾಮಾ‌ ಸೆಂಟರ್ ಸ್ಥಾಪಿಸುವ ಮೂಲಕ ಸರ್ವರಿಗೂ ಉಚಿತ ಅರೋಗ್ಯ, ಶಿಕ್ಷಣ ಒಗದಿಸಲಾಗುವುದು ಎಂದರು.

*ಕಲ್ಯಾಣ ಕರ್ನಾಟಕಕ್ಕೆ ಅಭಿವೃದ್ಧಿಗೆ ಒತ್ತು:*

ಯಡ್ರಾಮಿಯಲ್ಲಿ 906 ಕೋಟಿ ರೂ. ಮತ್ತು ಇಲ್ಲಿ 688 ಕೋಟಿ ರೂ. ಸೇರಿ ಸುಮಾರು 1,595 ಕೋಟಿ ರೂ. ಕಲಬುರಗಿ ಜಿಲ್ಲೆಯ ಕಾರ್ಯಕ್ರಮಗಳಿಗೆ ಇಂದಿಲ್ಲಿ ಚಾಲನೆ ನೀಡಿದ್ದೇವೆ. ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಒತ್ತಾಯದ ಮೇಲೆ ಸೇಡಂ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಗೇರಿಸಿದೆ. ಈ ಮೂಲಕ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಒತ್ತು ನಮ್ಮ‌ ಸರ್ಕಾರ ನೀಡಿದೆ ಎಂದರು.

371ಜೆ ಜಾರಿ ಪರಿಣಾಮ 10 ಸಾವಿರ ಜನ ಡಾಕ್ಟರ್,‌ 30 ಸಾವಿರ ಜನ ಇಂಜಿನೀಯರ್, 12 ಸಾವಿರ ಜನ ಡೆಂಟಲ್, ಕೃಷಿ ಪದವಿ ಪಡೆಯಲು ಸಾಧ್ಯವಾಯಿತು. ಕಲ್ಯಾಣ ಭಾಗದಲ್ಲಿ ಗರಿಷ್ಠ ಶೇ.80 ಮತ್ತು ಉಳಿದ ಪ್ರದೇಶದಲ್ಲಿ ಶೇ.8ರಂತೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನಮ್ಮ ಸರ್ಕಾರ ಜಾರಿಗೆ ತಂದಿದೆ. ಪರಿಣಾಮ 85 ಸಾವಿರ ಸ್ಥಳೀಯ ಜನರು ಉದ್ಯೋಗ ಪಡೆಯಲು ಸಫಲರಾಗಿದ್ದು, ಬಾಕಿ ಹುದ್ದೆಗಳನ್ನು ಸಹ ಹಂತ-ಹಂತವಾಗಿ ತುಂಬಲಾಗುವುದು ಎಂದು ಸಿ.ಎಂ. ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಸ್ಪಷ್ಡಪಡಿಸಿದರು.

*ನರೇಗಾ ಹಣ ಕಡಿತ,ಕೂಲಿಕಾರರಿಗೆ ಹೊಡೆತ:*

ರಾಜ್ಯಸಭೆ‌ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ಇತ್ತೀಚೆಗೆ ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಜಿ.ರಾಮ್-ಜಿ ಎಂದು ಮರುನಾಮಕರಣ ಮಾಡಿದಲ್ಲದೆ ಕೇಂದ್ರದಿಂದ ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸಿ ದೇಶದ ಬಹುಸಂಖ್ಯಾತ ಕೂಲಿ ಕಾರ್ಮಿಕರಿಗೆ ದೊಡ್ಡ ಹೊಡೆತ ನೀಡಿದೆ ಎಂದರು.

ನರೇಗಾ ಯೋಜನೆ ಜಾರಿಗೊಳಿಸಿದ್ದು ನಮ್ಮ ಸರ್ಕಾರ. ಆಗ ನರೇಗಾನಡಿ ಕೂಲಿ ಹಣ ಪಾವತಿಗೆ ಕೇಂದ್ರ ಮತ್ತು ರಾಜ್ಯ ಅನುದಾನ ಶೇ.90-10ರ ನಿಗದಿ ಮಾಡಿತ್ತು. ಅದು ಇದೂವರೆಗ ಚಾಲ್ತಿಯಲ್ಲಿತ್ತು. ಆದರೆ ಇಂದಿನ ಕೇಂದ್ರದ ಸರ್ಕಾರ ಇದೀಗ ಕೇಂದ್ರ ಮತ್ತು ರಾಜ್ಯ ಕ್ರಮವಾಗಿ ಶೇ.60-40 ಅನುದಾನ ನಿಗದಿಪಡಿಸಿ ರಾಜ್ಯ ಸರ್ಕಾರಕ್ಕೆ ಹೊರೆ ಮಾಡಿದ್ದಾರೆ. ಸಿ‌.ಎ.ಜಿ ಸಂಸ್ಥೆ ನರೇಗಾ ಯೋಜನೆಗೆ ಶ್ಲಾಘಿಸಿದರೂ ಇಂದಿನ ಕೇಂದ್ರ ಸರ್ಕಾರ ಬಡವರ ವಿರೋಧಿ ನೀತಿ ತಾಳುತ್ತಿದೆ. ಇಂತಹ ಜನವಿರೋಧಿ ನೀತಿಯನ್ನು ನಾವೆಲ್ಲರು ವಿರೋಧಿಸಬೇಕಾಗಿದೆ ಎಂದರು.

ತಾವು ಕೇಂದ್ರದ ಕಾರ್ಮಿಕ ಸಚಿವರಾಗಿದ್ದಾಗ ಜಿ-20 ಪೈಕಿ 18 ರಾಷ್ಟ್ರಕ್ಕೆ ಭೇಟಿ ನೀಡಿದ್ದೆ. ಅಲ್ಲಿ ನಮ್ಮ ನರೇಗಾ, ಆರ್.ಟಿ.ಐ, ಆಹಾರ ಭದ್ರತೆ ಯೋಜನೆ, ಕೆಲಸ-ಶಿಕ್ಷಣದ ಹಕ್ಕು, ಕಾರ್ಮಿಕ ನೀತಿಗಳ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ಇಂದು ಹೊಸದಾಗಿ 4 ಕಾರ್ಮಿಕ ಕೋಡ್ ಬಿಲ್ ತಂದು 8 ಗಂಟೆ ಬದಲಾಗಿ 12 ಗಂಟೆ ಕೆಲಸ‌ ಮಾಡುವ ನಿಯಮ ತರುತ್ತಿದ್ದು, ಇದು ಬಡವರನ್ನು ತುಳಿಯುವ ಕೆಲಸ, ಮಹಿಳಾ ವಿರೋಧಿ ಧೋರಣೆಯಾಗಿದೆ. ಇಂತಹ ನೀತಿಗಳ ವಿರುದ್ಧ ಜನ ಹೋರಾಡಬೇಕು ಎಂದರು.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಬಡವರ ಪಾಲಿಗೆ ಶ್ರಮಿಸುತ್ತಿದೆ. ನಮ್ಮ ಸರ್ಕಾರ ಬಂದಾಗಲೆಲ್ಲ ಬಡ ಜನರ ಕಣ್ಣೀರು ಒರೆಸು ಕೆಲಸ ಮಾಡಿದೆ. 371ಜೆ ಜಾರಿಗೆ ತಂದ ಪರಿಣಾಮ ಇಲ್ಲಿನ ಜನ ಮೆಡಿಕಲ್, ಇಂಜಿನೀಯರಿಂಗ್‌ ಸೀಟು ಪಡೆದಿದ್ದಾರೆ. ಪ್ರದೇಶದ ಅಭಿವೃದ್ಧಿಗೆ ಪ್ರತಿ ವರ್ಷ‌ ನುಡಿದಂತೆ 5,000 ಕೋಟಿ ರೂ. ಹಣ ಈ ಭಾಗಕ್ಕೆ ನೀಡಲಾಗುತ್ತಿದೆ ಎಂದರು.

*ನೀರಾವರಿ ಯೋಜನೆಗಳಿಗೆ 505 ಕೋಟಿ ರೂ. ನೀಡಲು ಬದ್ದ*

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗಕ್ಕೆ 371ಜೆ ಮೀಸಲಾತಿ ಜಾರಿಗೆ ತರುವ ಮೂಲಕ ಪ್ರದೇಶದ ಹಣೆಬರೆಹವನ್ನೆ ಬದಲಾಯಿಸಿದ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಕಾರ್ಯವನ್ನು ಪ್ರದೇಶದ ಜನ ಎಂದು ಮರೆಯಬಾರದು ಎಂದ ಅವರು, ಕ್ಷೇತ್ರದ ಶಾಸಕ ಡಾ.ಶರಣಪ್ರಕಾಶ ಪಾಟೀಲ ಅವರ ಕೋರಿಕೆಯಂತೆ ಸೇಡಂ ಮತ್ತು ಚಿಂಚೋಳಿ ತಾಲೂಕಿನ‌ ವಿವಿಧ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಕಾಗಿಣಾ ನದಿಗೆ ಅಡ್ಡಲಾಗಿ ಏತ‌ ನೀರಾವರಿ ಯೋಜನೆಗಳನ್ನು ಜಾರಿಗೆ ತರಲು 505 ಕೋಟಿ ರೂ. ಡಿ‌.ಪಿ.ಆರ್ ಸಿದ್ದಪಡಿಸಿ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದರು.

ಸೇಡಂನಲ್ಲಿ 80 ಕೋಟಿ ರೂ. ವೆಚ್ಚದಲ್ಲಿ ಮಲ್ಟಿ ಸ್ಕಿಲ್ ಡೆವಲೆಪಮೆಂಟ್ ಸೆಂಟರ್ ಸ್ಥಾಪಿಸಲಾಗುತ್ತಿದೆ. ಇಂದು ಯಡ್ರಾಮಿಯಲ್ಲಿ ಕೆ.ಒಇ.ಎಸ್. ಶಾಲೆ ಅರಂಬಕ್ಕೆ ಚಾಲನೆ ನೀಡಿದ್ದೇವೆ. ಗ್ರಾಮೀಣ ಜನರಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬುದು ನಮ್ಮ ಗುರಿ ಅದಕ್ಕಾಗಿ ಸಿ.ಎಸ್.ಆರ್ ಅನುದಾನದಡಿ ಸಹ ಶಾಲೆ ಅಭಿವೃದ್ಧಿಪಡಿಸಲಾಗುತ್ತಿದೆ. ನಿರುದ್ಯೋಗ ನಿರ್ಮೂಲನೆಗೆ ಪಣ ತೊಟ್ಟಿರುವ ಡಾ.ಶರಣಪ್ರಕಾಶ ಪಾಟೀಲ ಅವರು ಕ್ಷೇತ್ರದಲ್ಲಿ ಇಂದಿಲ್ಲಿ 688 ಕೋಟಿ ರೂ. ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಡಾ.ಶರಣಪ್ರಕಾಶ ಪಾಟೀಲ ಅವರು ಕೇವಲ ಸೇಡಂಗೆ ಶಾಸಕ ಮಾತ್ರವಲ್ಲ, ರಾಜ್ಯದ ಪ್ರಬುದ್ಧ ಜನ ನಾಯಕ. ಸರಳ‌ ಸಜ್ಜನ ರಾಜಕಾರಣಿ. ಇಂತಹವರನ್ನು ಪಡೆದ ನೀವೆ ಧನ್ಯವಂತರು ಎಂದು ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.

*ಸೇಡಂನಲ್ಲಿ ಅಭಿವೃದ್ಧಿ ಪರ್ವ, ನೀರಾವರಿಗೆ 500 ಕೋಟಿ ರೂ. ಕೊಡಿ*

ಕಾರ್ಯಕ್ರಮದ‌ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಶಾಸಕರಾಗಿರುವ ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಲಶ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಮಾತನಾಡಿ, ಇಂದಿಲ್ಲಿ 8 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ 320 ಕೋಟಿ ರೂ. ಮೊತ್ತದ ನೀರಾವರಿ ಯೋಜನೆಗಳ ಅಡಿಗಲ್ಲು ಹಾಕಲಾಗಿದೆ. ಆದರೆ ನಮ್ಮ ಬರಪೀಡತ ನೆಲಕ್ಕೆ ಇಷ್ಟು ಸಾಲದು. ಹೀಗಾಗಿ ಇನ್ನು 10 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು 500 ಕೋಟಿ ರೂ. ಅನುದಾನ ಸರ್ಕಾರ ನೀಡಬೇಕು ಎಂದು ಸಿ.ಎಂ, ಡಿ.ಸಿ.ಎಂ ರಲ್ಲಿ ಮನವಿ ಮಾಡಿದರು.

ಇಂದಿಲ್ಲಿ 688 ಕೋಟಿ ರೂ. ಯೋಜನೆಗಳಿಗೆ ಚಾಲನೆ ನೀಡಿದ್ದು, ಇದರ ಹೊರತಾಗಿ ಕಳೆದ ಎರಡೂವರೆ ವರ್ಷದ ನಮ್ಮ ಸರ್ಕಾರದ ಅವಧಿಯಲ್ಲಿ ಸೇಡಂ ತಾಲೂಕಿಗೆ 1,000 ಕೋಟಿ ರೂ. ಅನುದಾನ ತರುವ ಮೂಲಕ ರಾಷ್ಟ್ರಕೂಟರ ನಾಡಿನಲ್ಲಿ ಅಭಿವೃದ್ಧಿಯ ಪರ್ವ ಆರಂಭಿಸಲಾಗಿದೆ. ನುಡಿದಂತೆ ನಡೆಯುವ ಸರ್ಕಾರ ನಮ್ಮದು. ಚುನಾವಣೆ ಪೂರ್ವ ಭರವಸೆಯಂತೆ ಇಂದು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆವೆ. ಕ.ಕ. ಭಾಗಕ್ಕೆ 5,000 ಕೋಟಿ ರೂ. ಪ್ರದೇಶಕ್ಕೆ ನೀಡಲಾಗುತ್ತದೆ ಎಂದ ಅವರು ವಾಗ್ಧಾರಿ-ರಿಬ್ಬನಪಲ್ಲಿ 4 ಲೇನ್ ರಸ್ತೆಗೆ ಉನ್ನತಿಕರಿಸಬೇಕು, ಹೆಚ್ಚಿನ ತೊಗರಿ ಬೆಳೆಯುವ ಪ್ರದೇಶ ಇದಾಗಿರುವುದರಿಂದ ಬೇಳೆ ಕಾಳು ಅಭಿವೃದ್ಧಿ ಸಂಸ್ಥೆ ಸೇಡಂನಲ್ಲಿ ಸ್ಥಾಪಿಸಬೇಕೆಂದು ಕ್ಷೇತ್ರದ ಪರವಾಗಿ ಬೇಡಿಕೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್, ವಿಧಾನ ಪರಿಷತ್ ಶಾಸಕರಾದ ಚಂದ್ರಶೇಖರ ಪಾಟೀಲ, ಜಗದೇವ ಗುತ್ತೇದಾರ, ಕರ್ನಾಟಕ‌ ರಾಜ್ಯ ವಕ್ಫ್ ಮಂಡಳಿ ಸೈಯದ್ ಮಹಮ್ಮದ್ ಅಲಿ‌ ಅಲ್‌ ಹುಸೇನಿ, ಕಾಡಾ ಅಧ್ಯಕ್ಷ ಡಾ.ಅಬ್ದುಲ‌ ರಶೀದ್, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನಮ್, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಶೀಲ್ದಾರರ ಶ್ರೇಯಾಂಕಾ ಸೇರಿದಂತೆ ಅನೇಕ ಅಧಿಕಾರಿಗಳು, ಸಾವಿರಾರು ಸಂಖ್ಯೆಯಲ್ಲಿ ಜನಸಮೂಹ ಇವೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ‌ ಸ್ವಾಗತಿಸಿದರು. ಬಾನುಮತಿ ನಿರೂಪಿಸಿದರು.

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments

ಇತ್ತೀಚಿನ ಸುದ್ದಿಗಳು