ಮೂಡುಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ಭುಗಿಲೆದ್ದ ಆಕ್ರೋಶ: ಸುಮೋಟೋ ಕೇಸ್ ದಾಖಲಿಸಲು ಮಹಿಳಾ ಆಯೋಗದ ಖಡಕ್ ಸೂಚನೆ
ಬೆಂಗಳೂರು/ಮಂಗಳೂರು: ರಕ್ಷಣೆ ನೀಡಬೇಕಾದ ಪೊಲೀಸರೇ ಭಕ್ಷಕರಾದರೆ ಸಾಮಾನ್ಯ ಜನರ ಗತಿಯೇನು? ಇಂತಹದೊಂದು ಗಂಭೀರ ಹಾಗೂ ಆತಂಕಕಾರಿ ಪ್ರಶ್ನೆ ಇದೀಗ ಮೂಡುಬಿದ್ರೆಯಲ್ಲಿ ಕೇಳಿಬರುತ್ತಿದೆ. ಮೂಡುಬಿದ್ರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್ ಅವರ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳ ಬೆನ್ನಲ್ಲೇ, ರಾಜ್ಯ ಮಹಿಳಾ ಆಯೋಗ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸಂತ್ರಸ್ತ ಮಹಿಳೆಯರು ಠಾಣೆ ಮೆಟ್ಟಿಲೇರಿ ದೂರು ನೀಡುವವರೆಗೂ ಕಾಯುವ ಅಗತ್ಯವಿಲ್ಲ, ಲಭ್ಯವಿರುವ ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆಯೇ ಕೂಡಲೇ ‘ಸುಮೋಟೋ’ (ಸ್ವಯಂಪ್ರೇರಿತ) ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ.
ಗೃಹ ಸಚಿವರ ಜೊತೆಗೂ ಚರ್ಚೆ; ಕಮಿಷನರ್ಗೆ ಡೆಡ್ಲೈನ್!
“ಈ ಸೂಕ್ಷ್ಮ ಹಾಗೂ ಅಮಾನವೀಯ ಘಟನೆಯ ಬಗ್ಗೆ ನಾನು ಈಗಾಗಲೇ ಸನ್ಮಾನ್ಯ ಗೃಹ ಸಚಿವರೊಂದಿಗೆ ಸುದೀರ್ಘವಾಗಿ ಮಾತನಾಡಿದ್ದೇನೆ. ಇಂತಹ ಪ್ರಕರಣಗಳಲ್ಲಿ ಸಂತ್ರಸ್ತೆಯರು ದೂರು ನೀಡಲೇಬೇಕು ಎಂಬ ನಿಯಮವೇನಿಲ್ಲ. ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆಯೇ ಇಲಾಖೆಯ ಉನ್ನತ ಅಧಿಕಾರಿಗಳು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬಹುದು ಎಂದು ಸ್ವತಃ ಗೃಹ ಸಚಿವರೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಮಹಿಳಾ ಆಯೋಗದ ವತಿಯಿಂದಲೇ ಮಂಗಳೂರು ಪೊಲೀಸ್ ಕಮಿಷನರ್ಗೆ ಪತ್ರ ಬರೆಯಲಾಗಿದ್ದು, ಕೇವಲ ಎರಡು ದಿನಗಳ ಒಳಗೆ ಸಮಗ್ರ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದೇವೆ” ಎಂದು ಡಾ. ನಾಗಲಕ್ಷ್ಮಿ ಚೌಧರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಹಿಳೆಯರ ಕಣ್ಣೀರಿಗೆ ಬೆಲೆಯಿಲ್ಲವೇ? ದೌರ್ಜನ್ಯ ಎಂದಿಗೂ ಸಹಿಸಲ್ಲ:
“ಪೊಲೀಸ್ ಇಲಾಖೆ ಇರುವುದು ಜನಸಾಮಾನ್ಯರಿಗೆ, ಅದರಲ್ಲೂ ವಿಶೇಷವಾಗಿ ಅಸಹಾಯಕ ಮಹಿಳೆಯರಿಗೆ ರಕ್ಷಣೆ ನೀಡುವುದಕ್ಕಾಗಿಯೇ ಹೊರತು, ಕಾನೂನು ಮುರಿಯುವುದಕ್ಕಲ್ಲ. ಪತಿಯ ಮೇಲಿನ ಯಾವುದೋ ಪ್ರಕರಣಕ್ಕಾಗಿ, ಆತನ ಪತ್ನಿಯನ್ನು ಗುರಿಯಾಗಿಸಿ ಕಿರುಕುಳ ನೀಡುವುದು, ಮಾನಸಿಕ ದೌರ್ಜನ್ಯ ಎಸಗುವುದು ಅಕ್ಷಮ್ಯ ಅಪರಾಧ. ಇಂತಹ ಅಮಾನವೀಯ ವರ್ತನೆಗಳನ್ನು ಯಾವುದೇ ಕಾರಣಕ್ಕೂ ಮಹಿಳಾ ಆಯೋಗ ಸಹಿಸುವುದಿಲ್ಲ” ಎಂದು ಅವರು ಗುಡುಗಿದ್ದಾರೆ.
ಖಾಕಿ ಪಡೆಗೆ ಸ್ಪಷ್ಟ ಸಂದೇಶ ರವಾನೆಯಾಗಬೇಕು:
“ಇಲಾಖೆಯಲ್ಲಿ ಇಂತಹ ತಪ್ಪುಗಳನ್ನು ಮಾಡುವವರನ್ನು ಸುಮ್ಮನೆ ಬಿಡಬಾರದು. ತಪ್ಪು ಮಾಡಿದವರು ಯಾರೇ ಆಗಿರಲಿ, ಎಷ್ಟೇ ಪ್ರಭಾವಿಯಾಗಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಲೇಬೇಕು. ಆರೋಪ ಸಾಬೀತಾದರೆ ಕಾನೂನಿನ ಚೌಕಟ್ಟಿನಲ್ಲಿ ತಕ್ಕ ಶಾಸ್ತಿಯಾಗಬೇಕು. ಈ ಮೂಲಕ ಇಡೀ ಪೊಲೀಸ್ ಇಲಾಖೆಗೆ ಹಾಗೂ ಸಮಾಜಕ್ಕೆ ಒಂದು ಸ್ಪಷ್ಟ ಎಚ್ಚರಿಕೆಯ ಸಂದೇಶ ರವಾನೆಯಾಗಬೇಕು” ಎಂದು ಡಾ. ಚೌಧರಿ ತಮ್ಮ ಕಳಕಳಿ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಕಾನೂನು ಪಾಲಕರಿಂದಲೇ ಅನ್ಯಾಯಕ್ಕೊಳಗಾಗಿ ನ್ಯಾಯದ ನಿರೀಕ್ಷೆಯಲ್ಲಿರುವ ಸಂತ್ರಸ್ತೆಗೆ ನ್ಯಾಯ ಸಿಗುತ್ತದಾ? ಹಾಗೂ ವಿವಾದಿತ ಇನ್ಸ್ಪೆಕ್ಟರ್ ವಿರುದ್ಧ ಪೊಲೀಸ್ ಇಲಾಖೆ ಯಾವ ರೀತಿಯ ಕಠಿಣ ಕ್ರಮ ಜರುಗಿಸಲಿದೆ ಎಂಬುದನ್ನು ಈಗ ಕಾದು ನೋಡಬೇಕಿದೆ.
– ಕನ್ನಡ ಸಾಮ್ರಾಟ್ ಡಿಜಿಟಲ್ ಡೆಸ್ಕ್






