ಕಲಬುರಗಿ ಜಿಲ್ಲಾಧಿಕಾರಿ ನಿವಾಸದಲ್ಲಿ ಮಕ್ಕಳ ಕಲರವ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ‘ಸಕ್ಸಸ್ ಮಂತ್ರ’ ಹೇಳಿಕೊಟ್ಟ ಬಿ. ಫೌಜಿಯಾ ತರನ್ನಮ್!
ಕಲಬುರಗಿ: ಪರೀಕ್ಷೆ ಎಂದರೆ ಭಯವೇಕೆ? ಆತ್ಮವಿಶ್ವಾಸದಿಂದ ಮುನ್ನುಗ್ಗಿ, ರಾಜ್ಯಕ್ಕೇ ಟಾಪರ್ ಆಗಿ ಹೊರಹೊಮ್ಮಿ… ಹೀಗೆಂದು ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನಮ್ ಅವರು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿಯ ಚಿಲುಮೆ ಹರಿಸಿದರು.
ಬುಧವಾರ ಬೆಳಿಗ್ಗೆ ಜಗತ್ ವೃತ್ತದಲ್ಲಿರುವ ತಮ್ಮ ಅಧಿಕೃತ ನಿವಾಸದ ಅಂಗಳದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸಂವಾದದಲ್ಲಿ ಜಿಲ್ಲೆಯ ಆಯ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೊಂದಿಗೆ ಅವರು ಮುಕ್ತವಾಗಿ ಚರ್ಚಿಸಿದರು. ಅಧಿಕಾರಿ ಎಂಬ ಗತ್ತು ಬದಿಗಿಟ್ಟು, ಒಬ್ಬ ಪೋಷಕಿಯಂತೆ ಮಕ್ಕಳ ಆತಂಕಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಮಕ್ಕಳ ಪ್ರಶ್ನೆಗೆ ಡಿಸಿ ಉತ್ತರ: ಗೊಂದಲಕ್ಕೆ ಬಿತ್ತು ಬ್ರೇಕ್!
ಮಾರ್ಚ್ 18 ರಿಂದ ಆರಂಭವಾಗಲಿರುವ 2025-26ನೇ ಸಾಲಿನ ಪರೀಕ್ಷೆಗೆ ಸಜ್ಜಾಗುತ್ತಿರುವ 20 ಶಾಲೆಗಳ ಸುಮಾರು 40 ವಿದ್ಯಾರ್ಥಿಗಳು ಈ ಸಂವಾದದಲ್ಲಿ ಭಾಗವಹಿಸಿದ್ದರು.
- ”ಎಷ್ಟು ಗಂಟೆ ಓದಬೇಕು?”
- ”ಸಮಯ ನಿರ್ವಹಣೆ ಮಾಡುವುದು ಹೇಗೆ?”
- ”ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಗಳೇ ಮುಖ್ಯ ಪರೀಕ್ಷೆಗೆ ಬರುತ್ತವೆಯೇ?”
ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಎಸೆದ ವಿದ್ಯಾರ್ಥಿಗಳಿಗೆ ಡಿಸಿ ಅವರು ಅತ್ಯಂತ ಸರಳವಾಗಿ ಮತ್ತು ಪ್ರಾಯೋಗಿಕವಾಗಿ ವಿವರಿಸಿದರು. ಪರೀಕ್ಷಾ ಭಯವನ್ನು ಹೋಗಲಾಡಿಸಿ ಮಕ್ಕಳಲ್ಲಿ ನಗು ಮೂಡಿಸಿದರು.
‘ನಾನೂ ದೆಹಲಿಗೆ ಹೋಗಿಲ್ಲ, ಮನೆಯಲ್ಲೇ ಓದಿ IAS ಆದೆ’ – ಸ್ಫೂರ್ತಿದಾಯಕ ಮಾತು
ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಜಿಲ್ಲಾಧಿಕಾರಿಗಳು, “ನಾವು ಹಳ್ಳಿಯವರು, ನಮಗೆ ಸಾಧ್ಯವಿಲ್ಲ ಎಂಬ ಕೀಳರಿಮೆ ಬೇಡ. ನಾನು ಕೂಡ ದೆಹಲಿಗೆ ಕೋಚಿಂಗ್ ಪಡೆಯಲು ಹೋಗಲಿಲ್ಲ. ಮನೆಯಲ್ಲೇ ಲೈಬ್ರರಿ ಪುಸ್ತಕಗಳ ಸಹಾಯದಿಂದ ಓದಿ ಐಎಎಸ್ ಪಾಸಾದೆ. ಗುರಿ ದೊಡ್ಡದಾಗಿರಲಿ, ಆದರೆ ಅಲ್ಲಿಗೆ ತಲುಪಲು ಶಾರ್ಟ್ಕಟ್ ದಾರಿ ಹುಡುಕಬೇಡಿ,” ಎಂದು ತಮ್ಮ ವೈಯಕ್ತಿಕ ಸಾಧನೆಯ ಹಾದಿಯನ್ನು ತೆರೆದಿಟ್ಟರು.
“ನಿಮ್ಮ ಉಜ್ವಲ ಭವಿಷ್ಯಕ್ಕೆ ಎಸ್.ಎಸ್.ಎಲ್.ಸಿ ಒಂದು ಭದ್ರ ಬುನಾದಿ. ಪೋಷಕರ ಕನಸು ನನಸು ಮಾಡಲು ಮತ್ತು ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಲು ಅಂಕಗಳ ಜೊತೆಗೆ ಜ್ಞಾನ ಮತ್ತು ಕೌಶಲ್ಯವೂ ಮುಖ್ಯ,” – ಬಿ. ಫೌಜಿಯಾ ತರನ್ನಮ್, ಜಿಲ್ಲಾಧಿಕಾರಿಗಳು.
ಚಾಕಲೇಟ್, ಹಣ್ಣು ನೀಡಿ ಶುಭ ಹಾರೈಕೆ
ಕೇವಲ ಮಾತುಗಳಿಗಷ್ಟೇ ಸೀಮಿತವಾಗದ ಈ ಸಂವಾದದಲ್ಲಿ, ಡಿಸಿ ಅವರು ಮಕ್ಕಳಿಗೆ ಪೆನ್, ಬಿಸ್ಕತ್ತು, ಚಾಕಲೇಟ್ ಮತ್ತು ಹಣ್ಣುಗಳನ್ನು ವಿತರಿಸಿ ಪರೀಕ್ಷೆಗೆ ಶುಭ ಕೋರಿದರು. ಡಿಸಿಯವರ ಆತ್ಮೀಯತೆಗೆ ಮನಸೋತ ವಿದ್ಯಾರ್ಥಿಗಳು ಸಖತ್ ಖುಷಿಯಿಂದ ಮನೆಗೆ ಮರಳಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕಿ ಶಂಕ್ರಮ್ಮ ಢವಳಗಿ ಹಾಗೂ ವಿಷಯ ನಿರ್ವಾಹಕ ರಮೇಶ್ ಉಪಸ್ಥಿತರಿದ್ದರು.






