ಕಲಬುರಗಿಯಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
ಕಲಬುರಗಿ: ದಿನಾಂಕ 17-01-2026 ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಸಭೆಯು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ನಜಮ್ ಉಲ್ ಇಸ್ಲಾಮ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಗೆ ಆಗಮಿಸಿದ ಸಮಿತಿಯ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಕಾರ್ಯನಿರ್ವಾಹಕ ಅಧಿಕಾರಿ ಎಂ.ಡಿ ಸೈಯದ್ ಪಟೇಲ ರವರು ಸ್ವಾಗತ ಕೋರಿದರು.
ಸಭೆಯಲ್ಲಿ ಐದು ಗ್ಯಾರಂಟಿ ಯೋಜನೆಗಳ ಕುರಿತು ಅಧಿಕಾರಿಗಳು ವಿವರವಾದ ಮಾಹಿತಿ ನೀಡಿದರು.
ಯುವ ನಿಧಿ ಯೋಜನೆಯಡಿ ಕಲಬುರಗಿ ತಾಲೂಕಿನಲ್ಲಿ 9,492 ಫಲಾನುಭವಿಗಳಿದ್ದು, ಪ್ರತೀ ಆರು ತಿಂಗಳಿಗೆ ಆನ್‌ಲೈನ್ ಮೂಲಕ ಸ್ವಯಂ ಘೋಷಣೆ ಕಡ್ಡಾಯ ಎಂದು ತಿಳಿಸಲಾಯಿತು. ಕಾಲೇಜುಗಳು ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಯುವನಿಧಿ ಯೋಜನೆ ಕುರಿತು ಜಾಗೃತಿ ಮೂಡಿಸಲು ಅಧ್ಯಕ್ಷರು ಸೂಚಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ 1,61,181 ಅರ್ಜಿಗಳು ಸ್ವೀಕೃತವಾಗಿದ್ದು, ದಾಖಲೆಗಳ ಕೊರತೆ, ಬ್ಯಾಂಕ್ ಖಾತೆ ಸಮಸ್ಯೆ, ಇ-ಕೆವೈಸಿ ಪೂರ್ಣಗೊಳಿಸದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ 5,960 ಅರ್ಜಿಗಳು ತಿರಸ್ಕೃತವಾಗಿವೆ ಎಂದು ಶಿಶು ಅಭಿವೃದ್ಧಿ ಅಧಿಕಾರಿಗಳು ಮಾಹಿತಿ ನೀಡಿದರು.
ಅನ್ನಭಾಗ್ಯ ಯೋಜನೆಯಡಿ ತಾಲೂಕಿನಲ್ಲಿ 1,15,378 ಪಡಿತರ ಚೀಟಿಗಳಿದ್ದು, 4,24,476 ಸದಸ್ಯರು ಫಲಾನುಭವಿಗಳಾಗಿದ್ದಾರೆ. ಸಾರ್ವಜನಿಕರು ಖಾಸಗಿ ಇಂಟರನೆಟ್ ಸೆಂಟರ್‌ಗಳಿಗೆ ಹೋಗದೆ ನೇರವಾಗಿ ಆಹಾರ ಇಲಾಖೆ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಸೂಚಿಸಲಾಯಿತು. ಇಂಟರನೆಟ್ ಸೆಂಟರ್‌ಗಳಲ್ಲಿ ಹಣ ವಸೂಲಿ ನಡೆದರೆ ಪೊಲೀಸ್ ದೂರು ನೀಡುವಂತೆ ಅಧ್ಯಕ್ಷರು ತಿಳಿಸಿದರು.
ಶಕ್ತಿ ಯೋಜನೆಯಡಿ ಜೂನ್ 2023ರಿಂದ ಜನವರಿ 2026 ರವರೆಗೆ ಸುಮಾರು 9.80 ಕೋಟಿ ಮಹಿಳೆಯರು ಉಚಿತ ಪ್ರಯಾಣ ಸೌಲಭ್ಯ ಪಡೆದಿದ್ದು, ಇದರಿಂದ ಅಂದಾಜು ರೂ. 29,419 ಲಕ್ಷ ಸಾರಿಗೆ ಆದಾಯ ದೊರೆತಿದೆ ಎಂದು ಕೆಕೆಆರ್‌ಟಿಸಿ ಅಧಿಕಾರಿಗಳು ಹೇಳಿದರು.
ಗೃಹಜ್ಯೋತಿ ಯೋಜನೆಯಡಿ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಮನೆ ಬದಲಾವಣೆ ಮಾಡಿದಲ್ಲಿ ಡಿ-ಲಿಂಕ್ ವ್ಯವಸ್ಥೆ ಮಾಡಲಾಗುತ್ತಿದೆ. ಜನಜಾಗೃತಿಗಾಗಿ ಪ್ರತೀ ತಿಂಗಳ ಮೂರನೇ ಶನಿವಾರ ಗ್ರಾಹಕ ಅರಿವು ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಜೆಸ್ಕಾಂ ಅಧಿಕಾರಿಗಳು ತಿಳಿಸಿದರು.
ಸಭೆಯ ಅಂತ್ಯದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಎಲ್ಲಾ ಅಧಿಕಾರಿಗಳಿಗೆ ವಂದನಾರ್ಪಣೆ ಸಲ್ಲಿಸಿ ಸಭೆಯನ್ನು ಮುಕ್ತಾಯಗೊಳಿಸಿದರು.




